ಬಂಟ್ವಾಳ:ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದ್ದ ಬಿ.ಸಿ.ರೋಡ್ನ ಸರ್ವೀಸ್ ರಸ್ತೆಯ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ಕಾಂಕ್ರೀಟ್ ಕಾಮಗಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಬುಧವಾರ ಅಧಿಕೃತ ಚಾಲನೆ ನೀಡಿದರು.ಇದಕ್ಕೂ ಮೊದಲು ರಸ್ತೆಯಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ರಾ.ಹೆ.ಪ್ರಾ. ಇಲಾಖೆಯ ಸಹಾಯಕ ಇಂಜಿನೀಯರ್ ಅಜಿತ್ ಅವರೊಂದಿಗೆ ಚರ್ಚಿಸಿ, ಅದರ ಪರಿಹಾರಕ್ಕೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್, ಬಿ.ಸಿ.ರೋಡಿನ ಸಹಿತ ಜಿಲ್ಲೆಯ ವಿವಿಧ ಭಾಗಗಳ ಸರ್ವೀಸ್ ರಸ್ತೆಯ ಅಭಿವೃದ್ಧಿಗೆ 19 ಕೋಟಿ ರೂ.ನ ಪ್ರಸ್ತಾವನೆಗೆ ಕೇಂದ್ರ ಸರಕಾರವು ಮಂಜೂರಾತಿ ನೀಡಿದೆ. ಈ ಪೈಕಿ ಬಿ.ಸಿ.ರೋಡಿನ ಸುಮಾರು 550 ಮೀಟರ್ ಉದ್ದದ ಸರ್ವೀಸ್ ರಸ್ತೆಯ ಕಾಂಕ್ರೀಕರಣ ಕಾಮಗಾರಿ 1.72 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ ಎಂದು ಹೇಳಿದರು.ಬಿಸ್ಸೆನ್ನೆಲ್, ಮೆಸ್ಕಾಂ ಇಲಾಖೆಯ ಸಮನ್ವಯತೆಯ ಕೊರತೆ ಹಾಗೂ ಕೆಲವೊಂದು ತಾಂತ್ರಿಕ ಅಡಚಣೆಯಿಂದ ಕಾಮಗಾರಿ ಸ್ವಲ್ಪ ಮಟ್ಟಿನ ವಿಳಂಬವಾಗಿದೆ ಎಂದ ಅವರು, ನಿಗದಿತ ಅವಧಿಯೊಳಗೆ ಗುಣಮಟ್ಟವನ್ನು ಕಾಪಾಡಿಕೊಂಡು ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
* ಅತಿಕ್ರಮಣ, ತಂಗುದಾಣ ತೆರವಿಗೆ ಸೂಚನೆ:
ಸರ್ವೀಸ್ ರಸ್ತೆಯಲ್ಲಿ ಪರಿಹಾರ ಪಡೆದುಕೊಂಡು ಇನ್ನೂ ಕೂಡಾ ತೆರವು ಮಾಡದ ಸುಮಾರು 12 ಕಟ್ಟಡಗಳ ಸಹಿತ ಬಂಟ್ವಾಳ ಪುರಸಭೆಯು ರಾ.ಹೆ.ಗಳಲ್ಲಿ ನಿರ್ಮಿಸುತ್ತಿರುವ ನೂತನ ಬಸ್ ತಂಗುದಾಣವನ್ನು ತೆರವುಗೊಳಿಸಲು ಈಗಾಗಲೇ ಅಧಿ ಕಾರಿಗಳಿಗೆ ಸೂಚಿಸಲಾಗಿದೆ. ರಾ.ಹೆ.ಪ್ರಾ. ಇಲಾಖೆಯೇ ಗುರುತಿಸಿದ ಸ್ಥಳದಲ್ಲಿ ಬಸ್ ತಂಗುದಾಣವನ್ನು ಸಂಸದರ ಅನುದಾನದಿಂದಲೇ ನಿರ್ಮಿಸಲಾಗುವುದು ಎಂದ ಅವರು,
ಕೇವಲ ಬಿ.ಸಿ.ರೋಡ್ ಮಾತ್ರವಲ್ಲ ಜಿಲ್ಲೆಯ ವಿವಿಧೆಡೆಯಲ್ಲಿ ರಾ.ಹೆ.ಯನ್ನು ಅತಿಕ್ರಮಿಸಿರುವ ಕಟ್ಟಡಗಳ ತೆರವಿಗೂ ಜಿಲ್ಲಾಧಿ ಕಾರಿ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪೊಲೀಸರ ಸಹಕಾರದೊಂದಿಗೆ ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳಲಿದೆ ಎಂದು ಸುದ್ದಿಗಾರರ ಪ್ರಶ್ನಿಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ಮಕ್ಕಳ ಆಸ್ಪತ್ರೆಯೊಂದಕ್ಕೆ ಹೋಗುವ ರಸ್ತೆಯಲ್ಲಿರುವ ನಿವಾಸಿಗಳು ಸಂಸದರಿಗೆ ಇಲ್ಲಿನ ಕೆಲ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ತಕ್ಷಣ ಈ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಇಂಜಿನೀಯರ್ ಅಜಿತ್ ಅವರಿಗೆ ಸೂಚಿಸಿದರು.
* ಸಚಿವರು ಒಪ್ಪಿಕೊಳ್ಳಲಿ:
ಹದಗೆಟ್ಟ ಬಿ.ಸಿ.ರೋಡಿನ ಸರ್ವೀಸ್ ರಸ್ತೆಗೆ ಕಾಂಕ್ರೀಟಿಕರಣದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದ್ದು, ಈ ಕಾಮಗಾರಿ ಕೇಂದ್ರ ಸರಕಾರದ ಅನುದಾನದಿಂದ ತನ್ನ ಶ್ರಮದ ಫಲವಾಗಿ ನಡೆಯುತ್ತಿದೆ. ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ತನ್ನನ್ನು ನಂ.1 ಸಂಸದ ಎಂದು ಒಪ್ಪಿಕೊಳ್ಳುವರೇ? ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸಚಿವರಿಗೆ ಟಾಂಗ್ ನೀಡಿದರು. ಕೆಲ ದಿನಗಳ ಹಿಂದೆ ಸಚಿವ ರಮಾನಾಥ ರೈ ಅವರು ಸರ್ವೀಸ್ ರಸ್ತೆಯನ್ನು ದುರಸ್ಥಿಗೊಳಿಸಲು ಸಾಧ್ಯವಿಲ್ಲದ ಸಂಸದ ಸಳಿನ್ ಕುಮಾರ್ ಕಟೀಲ್ ನಂ.1 ಆಗಲು ಹೇಗೆ ಸಾಧ್ಯ? ಎಂದು ಸುದ್ದಿ ಗೋಷ್ಠಿಯಲ್ಲಿ ಲೇವಡಿ ಮಾಡಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದೇವದಾಸ್ ಶೆಟ್ಟಿ, ಗೋವಿಂದ ಪ್ರಭು, ಸುಲೋಚನಾ ಜಿ.ಕೆ. ಭಟ್, ಜಿ.ಆನಂದ, ಚೆನ್ನಪ್ಪ ಕೋಟ್ಯಾನ್, ರಾಮ್ದಾಸ್ ಬಂಟ್ವಾಳ, ಸುಗುಣ ಕಿಣಿ, ರವೀಂದ್ರ ಕಂಬಳಿ, ಮಹಾಬಲ ಶೆಟ್ಟಿ, ಮೋನಪ್ಪ ದೇವಸ್ಯ, ರಮಾನಾಥ ರಾಯಿ, ಸಂತೋಷ್ ರಾಯಿಬೆಟ್ಟು, ಗಣೇಶ್ ರೈ ಮಾಣಿ, ಸೀತಾರಾಮ್ ಪೂಜಾರಿ, ರಾ.ಹೆ.ಪ್ರಾ. ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.