ಬಂಟ್ವಾಳ:ಇಲ್ಲಿನ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದ ಪುರಸಭಾ ವ್ಯಾಪ್ತಿಯ ಎರಡನೇ ಹಂತದ ಒಳಚರಂಡಿ ಯೋಜನೆಗೆ ರೂ 54.54 ಕೋಟಿ ಮತ್ತು ಅಮ್ಮುಂಜೆ ಗ್ರಾಮದ ಬೆಂಜನಪದವು ಎಂಬಲ್ಲಿ ರೂ 10 ಕೋಟಿ ವೆಚ್ಚದ ತಾಲ್ಲೂಕು ಮಟ್ಟದ ಕ್ರೀಡಾಂಗಣ ನಿರ್ಮಿಸಲು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೂಲಕ ಒತ್ತಡ ಹೇರಿ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ಟೆಂಡರ್ ಪ್ರಕ್ರಿಯೆ ಮತ್ತಿತರ ಮುಂದಿನ ಹಂತದ ಚಟುವಟಿಕೆಗಳು ಮಾತ್ರ ಯಥಾವತ್ತಾಗಿ ನಡೆಯುತ್ತದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ತಾಲ್ಲೂಕಿನ ಬಿ.ಸಿ.ರೋಡು ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.27btl-Rai

ಪುರಸಭಾ ವ್ಯಾಪ್ತಿಯ ಸಮಗ್ರ ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳೀಯ ಇಬ್ಬರು ವ್ಯಕ್ತಿಗಳು ಭೂಸ್ವಾಧೀನ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಪರಿಣಾಮ ಕಾಮಗಾರಿ ತ್ವರಿತಗೊಳಿಸಲು ವಿಳಂಬವಾಗಿತ್ತು. ಬೆಂಜನಪದವು ಕ್ರೀಡಾಂಗಣಕ್ಕೆ ಸರ್ಕಾರಿ ಜಮೀನಿನ ಮಧ್ಯೆ ಇದ್ದ ಖಾಸಗಿ ಜಮೀನು ಖರೀದಿಸಿ ಅವರಿಗೆ ಮತ್ತೆ ಸರ್ಕಾರಿ ಜಮೀನು ಹಸ್ತಾಂತರಿಸುವ ಪ್ರಕ್ರಿಯೆ ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆದಿದ್ದು, ಇದೀಗ ಒಟ್ಟು 9 ಎಕ್ರೆ ಜಮೀನಿನಲ್ಲಿ ರೂ 10 ಕೋಟಿ ವೆಚ್ಚದ ಸುಸಜ್ಜಿತ ಕ್ರೀಡಾಂಗಣ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಿರ್ಮಾಣಗೊಳ್ಳಲಿದೆ ಎಂದರು.

ತ್ಯಾಜ್ಯ ಸಂಸ್ಕರಣೆಗೆ ಪೈರೋಲಿಸಿಸ್ ಯಂತ್ರ:
ಪುರಸಭಾ ವ್ಯಾಪ್ತಿಯಲ್ಲಿ ಒಣ ಮತ್ತು ಹಸಿ ತ್ಯಾಜ್ಯ ಸಂಸ್ಕರಿಸಲು ಪರಿಸರ ನಿಯಂತ್ರಣ ಇಲಾಖೆ ವತಿಯಿಂದ ಪೈಲೆಟ್ ಯೋಜನೆಯಡಿ ರೂ 96ಲಕ್ಷ ವೆಚ್ಚದಲ್ಲಿ ಪೈರೋಲಿಸಿಸ್ ಅತ್ಯಾಧುನಿಕ ಯಂತ್ರ ಅಳವಡಿಸಲು ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯ ವೃತ್ತದಿಂದ ಪುಂಜಾಲಕಟ್ಟೆ ತನಕ ದ್ವಿಪಥ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ರೂ 157 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಈ ಪೈಕಿ ರೂ 100 ಕೋಟಿ ರಸ್ತೆ ಅಭಿವೃದ್ಧಿ ಮತ್ತು ರೂ 57 ಕೋಟಿ ಭೂಸ್ವಾಧೀನ ಪ್ರಕ್ರಿಯೆಗೆ ಮೀಸಲಾಗಿದೆ. ಇದರಲ್ಲಿ ಬಿ.ಸಿ.ರೋಡ್‍ನಿಂದ ಜಕ್ರಿಬೆಟ್ಟು ತನಕ ಚತುಷ್ಪಥ ರಸ್ತೆ ಕಾಂಕ್ರಿಟೀಕರಣಗೊಳ್ಳಲಿದೆ ಎಂದರು.

ಈಗಾಗಲೇ ಶಂಕು ಸ್ಥಾಪನೆಗೊಂಡ ಪಶ್ಚಿಮವಾಹಿನಿ ಯೋಜನೆಯ ಎಲ್ಲಾ ಕಿಂಡಿ ಅಣೆಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಿಗೂ ಡಾಂಬರೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಈ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಉದಾಸೀನ ಮಾಡಿಲ್ಲ ಎಂದು ಹೇಳಿದ ಅವರು ಅನಗತ್ಯ ಅಪಪ್ರಚಾರ ಮಾಡುವವರು ಮತ್ತು ಜನತೆಗೆ ನೈಜ ವಿಚಾರ ತಿಳಿಯಬೇಕು ಎಂದರು.

ಮುಲಾರಪಟ್ನ ಸೇತುವೆ ದುರಸ್ತಿಗೊಂಡಿದೆ:
ಕಳೆದ 15 ವರ್ಷಗಳ ಹಿಂದೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಮುಲಾರಪಟ್ನ ಸೇತುವೆ ಶಿಥಿಲಗೊಂಡಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ದುರಸ್ತಿಗೊಳಿಸಲಾಗಿತ್ತು. ಕಳೆದ 15ವರ್ಷಗಳಿಂದಲೂ ಅಕ್ರಮ ಮರಳುಗಾರಿಕೆ ಕಾಂಗ್ರೆಸ್ ಮುತ್ತು ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೇರು ನಿಗಮ ಅಧ್ಯಕ್ಷ ಬಿ. ಎಚ್. ಖಾದರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ. ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಅಲಿ ಮತ್ತು ಕೆ.ಮಾಯಿಲಪ್ಪ ಸಾಲ್ಯಾನ್, ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಬೇಬಿ ಕುಂದರ್, ಎಪ್ರಿಯಂ ಸಿಕ್ವೇರಾ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಚಂದ್ರಶೇಖರ್ ರೈ, ಮಹೇಶ ನಾಯಕ್, ಡೆಂಜಿಲ್ ಅಲ್ಲಿಪಾದೆ ಮತ್ತಿತರರು ಇದ್ದರು.
…
ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಇಲ್ಲ:
ಮುಂಬರುವ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಬಲವರ್ಧನೆ ಕಾರ್ಯ ನಡೆಯುತ್ತಿದ್ದು, ಹೈಕಮಾಂಡ್ ಸೂಚಿಸಿದರೆ ಸಾಮಾಜಿಕ ನ್ಯಾಯ ನೀಡುವ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಸ್ಪರ್ಧಿಸಲು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
–

By suddi9

Leave a Reply

Your email address will not be published. Required fields are marked *