ಮೂಡುಬಿದಿರೆ : ಆಷಾಢ ತಿಂಗಳಲ್ಲಿ ಮಾಡುವ ಆಹಾರ ಪದಾರ್ಥಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಈ ತಿಂಗಳಲ್ಲಿ ಭೂಮಿಯು ತನ್ನ ಒಡಲಿನಿಂದ ನೀಡುವ ವಸ್ತುಗಳಲ್ಲಿ ಔಷಧೀಯ ಗುಣಗಳಿದ್ದು ಇದು ಮಹಿಳೆಯರ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಉತ್ತಮ ಔಷಧವಾಗಿದೆ ಎಂದು ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ/ಮಧುಮಾಲ ಹೇಳಿದರು.
ಅವರು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ) ಮೂಡುಬಿದಿರೆ ಶ್ರೀ ನಾರಾಯಣ ಗುರು ಸೇವಾದಳ, ಶ್ರೀ ನಾರಾಯಣ ಗುರು ಮಹಿಳಾ ಘಟಕದ ಸಹಯೋಗದಲ್ಲಿ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆದ “ಆಟಿಡೊಂಜಿ ದಿನ-2018” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಹೆತ್ತವರು ತಮ್ಮ ಮನೆಗಳಲ್ಲಿ ಉತ್ತಮ ಆರೋಗ್ಯಕ್ಕೆ ಬೇಕಾಗಿರುವ ಆಹಾರ ಪದಾರ್ಥಗಳನ್ನು ಮಾಡದೆ ಇರುವುದರಿಂದ ಹಾಗೂ ಮಕ್ಕಳ ಯೋಗಕ್ಷೇಮದ ಕಡೆಗೆ ಹೆಚ್ಚಿನ ಗಮನ ನೀಡದಿರುವುದರಿಂದ ಸಂಬಂಧಗಳು ನಶಿಸಿ ಹೋಗುತ್ತಿವೆ ಜತೆಗೆ ಮಕ್ಕಳು ಬೇಕರಿ-ಹೊಟೇಲಿನ ತಿಂಡಿ ತಿನಿಸುಗಳಿಗೆ ಮಾರು ಹೋಗುತ್ತಿದ್ದು ಇದರಿಂದಾಗಿ ಮಾನಸಿಕ ಮತ್ತು ನಾನಾ ರೀತಿಯ ದೈಹಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆತ್ತವರು ಮಕ್ಕಳಿಗೆ ಆಷಾಢ ತಿಂಗಳ ಮತ್ತು ತಿನಿಸುಗಳ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ ಎಂದರು.
ಶ್ರೀ ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸುಭಾಷ್ ಅಧ್ಯಕ್ಷತೆಯನ್ನು ವಹಿಸಿದ್ದರು. ಗುಣವತಿ ರಮೇಶ್ ಆಷಾಢದ ಮಹತ್ವವನ್ನು ತಿಳಿಸಿದರು.
ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ರವೀಂದ್ರ ಎಂ.ಸುವರ್ಣ, ಗೌರವಾಧ್ಯಕ್ಷ ವಾಸು ಪೂಜಾರಿ, ಸೇವಾದಳದ ಅಧ್ಯಕ್ಷ ರಮೇಶ್ ಅಮೀನ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಭಾನುಮತಿ ಶೀನಪ್ಪ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಂತರ ಮಹಿಳಾ ಘಟಕದ ಸದಸ್ಯೆಯರಿಂದ ಮತ್ತು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮವನ್ನು ಸಂಘದ ಸದಸ್ಯೆ ಮಾಲತಿ ಗೋಪಿನಾಥ್ ಸ್ವಾಗತಿಸಿದರು. ಉಷಾ ಮಧುಕರ್ ನಿರೂಪಿಸಿದರು. ಕಾರ್ಯದರ್ಶಿ ಸ್ವಾತಿ ವಂದಿಸಿದರು.
