ಬಂಟ್ವಾಳ : ಪಾದಚಾರಿಗಳಿಗೆ ನಡೆದಾಡುವ ನಿಟ್ಟಿನಲ್ಲಿ   ಅಗಲ ಕಿರಿದಾದ ಬಂಟ್ವಾಳ ಪೇಟೆಯನ್ನು ಅಗಲೀಕರಣ  ಮಾಡಿಯೇ ಸಿದ್ಧ ಇದು  ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿನಿಧಿಗಳು ನೀಡಿರುವ ಸ್ಪಷ್ಟ ಮಾತುಗಳನ್ನಾಡಿದರು.
ಪುರಸಭಾ ಚುನಾವಣಾ ಹಿನ್ನಲೆಯಲ್ಲಿ  ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ  ಸೋಮವಾರ ಸಂಜೆ    ಆಯೋಜಿಸಿದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸುದ್ದಿಗಾರರ ಗಮನಸೆಳೆದ ಈ ಪ್ರಶ್ನೆಗೆ   ಕಾಂಗ್ರೆಸ್ ನಿಂದ ಪ್ರತಿನಿಧಿಯಾಗಿದ್ದ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ  ಮತ್ತು ಬಿಜೆಪಿ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪುರಸಭಾಸದಸ್ಯ ದೇವದಾಸ ಶೆಟ್ಟಿ ಅವರು  ನೀಡಿರುವ ಸ್ಪಷ್ಟ ನುಡಿ ಇದು. ತಾನು ಅಧ್ಯಕ್ಷನಾಗಿದ್ದಾಗ ತಾನೇ ಮುತುವರ್ಜಿ ವಹಿಸಿ ಬಂಟ್ವಾಳ ಪೇಟೆ ಅಗಲೀಕರಣಕ್ಕೆ  ಮುಂದಾಗಿದ್ದೆ. ಈ ಸಂಬಂಧ        ಕೆಲಪ್ರಕ್ರಿಯೆಯುನಡೆದಿತ್ತು.   ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ ಎಂದು ಈಸಂದರ್ಭ ರಾಮಕೃಷ್ಣ ಆಳ್ವರು ತಿಳಿಸಿದರೆ, ಬಿಜೆಪಿ ಆಡಳಿತಕ್ಕೆ ಬಂದಲ್ಲಿ ಸ್ಥಳೀಯ ಜನರನ್ನು  ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ಅಗಲೀಕರಣ ಮಾಡಿಯೇ ಮಾಡುತ್ತೆವೆ  ಎಂದು  ದೇವದಾಸ ಶೆಟ್ಟಿ ಭರವಸೆ ಕೊಟ್ಟರು, ರಾಮಕೃಷ್ಣ ಆಳ್ವ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ  ಪೇಟೆ ಅಗಲೀಕರಣ ಗೊಳಿಸುವುದಲ್ಲದೆ ಪುಟ್ ಪಾತ್, ಪಾರ್ಕಿಂಗ್ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಭರವಸೆ ನೀಡಿದರು.
27-01
ಕಾಂಗ್ರೆಸ್ ನಿಂದ ನಿಕಟಪೂರ್ವ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬಿಜೆಪಿಯಿಂದ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಎಸ್.ಡಿ.ಪಿ.ಐ.ನಿಂದ ಬಂಟ್ವಾಳ ಪುರಸಭೆ ಘಟಕ ಅಧ್ಯಕ್ಷ ಮೊನೀಶ್ ಆಲಿ ಮತ್ತು ಜೆಡಿಎಸ್ ನಿಂದ ಹಾರೂನ್ ರಶೀದ್ ಸಂವಾದದಲ್ಲಿ ಪಾಲ್ಗೊಂಡಿದ್ದರು.   ಕಳೆದ ಅವಧಿಯಲ್ಲಿ ಗರಿಷ್ಠ ಮೊತ್ತದ ಅನುದಾನವನ್ನು ಮಾಜಿ ಸಚಿವ ರಮಾನಾಥ ರೈ ಅವರ ಮುತುವರ್ಜಿಯಿಂದ ಪುರಸಭೆಗೆ ಒದಗಿಸಲಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ ಕಾಂಗ್ರೆಸ್ ನ ರಾಮಕೃಷ್ಣ ಆಳ್ವ, ಮುಂದೆಯೂ ಮಂಜೂರುಗೊಂಡ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಹಾಗೂ ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಸಂದರ್ಭ ಮಾತನಾಡಿದ ಬಿಜೆಪಿಯ ದೇವದಾಸ ಶೆಟ್ಟಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಆಯವ್ಯಯದಲ್ಲಿ ಲೋಪದೋಷಗಳಾಗಿವೆ, ಹಲವು ಹಗರಣಗಳು ನಡೆದಿವೆ ಎಂದು ಆರೋಪಿಸಿ, ಬಂಟ್ವಾಳವನ್ನು ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕ ಆಡಳಿತ ನಡೆಸುವುದೇ ಬಿಜೆಪಿಯ ಸಂಕಲ್ಪ ಎಂದರು.27-02
ಪುರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯವಸ್ಥಿತ ಮಾರುಕಟ್ಟೆ ಕುರಿತು ಪ್ರಶ್ನೆಗೆ ಉತ್ತರಿಸಿದ ದೇವದಾಸ ಶೆಟ್ಟಿ ವಾರದ ಸಂತೆ ನಡೆಸುವುದು, ಬೀದಿಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು. ಈಗಾಗಲೇ ಅದಕ್ಕೆ ತನ್ನ ಆಡಳಿತ ಅವಧಿಯಲ್ಲಿ ಜಾಗ ಗುರುತಿಸಲಾಗಿದ್ದು, ಚುನಾವಣಾ ಘೋಷಣೆ ಹಿನ್ನೆಲೆಯಲ್ಲಿ ಕಾರ್ಯಗತಗೊಳ್ಳಲಿಲ್ಲ ಎಂದು ಆಳ್ವ ಹೇಳಿದರು.
ತ್ಯಾಜ್ಯ ವಿಲೇವಾರಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಸ್.ಡಿ.ಪಿ.ಐ.ನ ಮೊನೀಶ್ ಆಲಿ, ಮನೆ, ಮಳಿಗೆಗಳಿಂದಲೇ ತ್ಯಾಜ್ಯವನ್ನು ಸಮರ್ಪಕವಾಗಿ ತೆಗೆದುಕೊಂಡು ಹೋಗುವ ವ್ಯವಸ್ಥೆ ನಿರ್ಮಾಣ ಆಗಿಲ್ಲ. ತಮ್ಮ ಆಡಳಿತ ಅವಧಿಯಲ್ಲಿ ಕಸ ವಿಲೇವಾರಿಯನ್ನು ಸುಸಜ್ಜಿತಗೊಳಿಸುವುದು ಆದ್ಯತೆ ಎಂದರೆ, ಬಿಜೆಪಿಯ ದೇವದಾಸ ಶೆಟ್ಟಿ ಅವರು, ಕಂಚಿನಡ್ಕಪದವಿನಲ್ಲಿ ನಮ್ಮ ಸರಕಾರ ಇದ್ದಾಗ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಜಾಗ ಗುರುತಿಸಿತ್ತು. ಆದರೆ ಆಡಳಿತ ಬದಲಾದ ಬಳಿಕ ಅದನ್ನು ಮುಂದುವರಿಸಲು ಆಗಿರಲಿಲ್ಲ ಎಂದು ದನಿಗೂಡಿಸಿದರು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ನ ರಾಮಕೃಷ್ಣ ಆಳ್ವ, ಪೈರೋಲಿಸಿಸ್ ಯಂತ್ರ ಅಳವಡಿಸಿ ಸಮಗ್ರ ತ್ಯಾಜ್ಯ ವಿಲೇವಾರಿ ನಡೆಸುವುದಾಗಿ ಹೇಳಿದರು.
27-003
 ಪ್ಲಾಸ್ಟಿಕ್ ಮುಕ್ತ ಪುರಸಭೆಯಾಗಲು ಸರಕಾರ ಮುತುವರ್ಜಿ ವಹಿಸಬೇಕು ಎಂದು ಆಳ್ವ ಹೇಳಿದರೆ, ಈ ಕುರಿತು ಜನಜಾಗೃತಿಯ ಅಗತ್ಯವಿದೆ ಎಂದು ಶೆಟ್ಟಿ ಹೇಳಿದರು.
ಮೂಲಭೂತ ಸೌಕರ್ಯಗಳನ್ನು ಜನರಿಗೆ ತಲುಪಿಸುವ ಮಧ್ಯವರ್ತಿಯಾಗಿ ಸ್ವಚ್ಛ ಆಡಳಿತ ನಡೆಸುವುದಾಗಿ ಮೊನೀಶ್ ಆಲಿ ಹೇಳಿದರೆ,    ಸಿಎಂ ಕುಮಾರಸ್ವಾಮಿ ಅವರ ಮನವೊಲಿಸಿ ಗರಿಷ್ಠ ಅನುದಾನವನ್ನ ತರಿಸುವುದಾಗಿ ಹಾರೂನ್ ರಶೀದ್ ಹೇಳಿದರು.  ಹೊಂದಾಣಿಕೆ ಇಲ್ಲ;    ಕಾಂಗ್ರೆಸ್ ಮತ್ತು ಬಿಜೆಪಿ ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಆಡಳಿತ ನಡೆಸಲು ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
 ಕಾಂಗ್ರೆಸ್ ಮತ್ತು ಬಿಜೆಪಿ ಬಹುಮತ ಬಾರದೇ ಇದ್ದರೆ ವಿಪಕ್ಷದಲ್ಲಿ ಕೂರಲು ಸಿದ್ಧ ಎಂದರೆ ಎಸ್.ಡಿ.ಪಿ.ಐ. ಸಮಾನ ಮನಸ್ಕ ಜನಪ್ರತಿನಿಧಿಗಳೊಂದಿಗೆ ಆಡಳಿತ ನಡೆಸುತ್ತೇವೆ ಎಂದು ಹೇಳಿದೆ.                              ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಸಮನ್ವಯಕಾರರಾಗಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮೊಹಮ್ಮದ್ ಆಲಿ ವಂದಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪತ್ರಕರ್ತರಾದ ವೆಂಕಟೇಶ್ ಬಂಟ್ವಾಳ, ರಾಜಾ ಬಂಟ್ವಾಳ, ಯಾದವ ಅಗ್ರಬೈಲು, ಅಬ್ದುಲ್ ರಹಿಮಾನ್ ತಲಪಾಡಿ, ಗೋಪಾಲ ಅಂಚನ್, ಸಂದೀಪ್ ಸಾಲ್ಯಾನ್, ವಾಮನ ಪೂಜಾರಿ, ಲತೀಫ್ ನೇರಳಕಟ್ಟೆ, ರತ್ನದೇವ ಪುಂಜಾಲಕಟ್ಟೆ, ಚಂದ್ರಶೇಖರ ಕಲ್ಮಲೆ, ಮೋಹನ್ ಕೆ. ಶ್ರೀಯಾನ್, ಜಯಾನಂದ ಪೆರಾಜೆ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *