ಮೂಡುಬಿದಿರೆ: ಪ್ರಸಕ್ತ ಸಾಲಿನಲ್ಲಿ ಅತಿಯಾಗಿ ಸುರಿದ ಮಳೆಯಿಂದಾಗಿ ಹಾನಿಗೊಳಗಾಗಿರುವ ಶಿರ್ತಾಡಿ ಪೆಟ್ರೋಲ್ ಬಂಕ್ ಮುಂಭಾಗದ ರಸ್ತೆಗೆ ಭುವನಜ್ಯೋತಿ ಶಾಲಾ ಆಡಳಿತ ಮಂಡಳಿ ಹಾಗೂ ಅಳಿಯೂರಿನ ಕೆಂಚರವರ ನೇತೃತ್ವದಲ್ಲಿ ಆ.28ರಂದು ಜಲ್ಲಿಪುಡಿ ಹಾಕಲಾಯಿತು.

ಮಳೆಯ ತೀವ್ರತೆಗೆ ರಸ್ತೆಯು ಸಂಪೂರ್ಣ ಹಾನಿಗೊಳಗಾಗಿ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿತ್ತು. ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಮುಗ್ಗರಿಸಿ ಬೀಳುವ ಅಪಾಯವೂ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ರಸ್ತೆಗೆ ಜಲ್ಲಿ ಪುಡಿ ಸಿಂಪಡಿಸಿ ಸಂಚಾರಯೋಗ್ಯವನ್ನಾಗಿ ಮಾಡಲಾಯಿತು. ಈ ರಸ್ತೆಯ ಇಕ್ಕೆಲಗಳಲ್ಲಿದ್ದ ಚರಂಡಿಯು ಮುಚ್ಚುಗಡೆಯಾಗಿರುವುದರಿಂದ ಮಳೆನೀರು ರಸ್ತೆಯಲ್ಲೇ ಸಾಗಿ ಜಲ್ಲಿ ಸಹಿತ ಡಾಮಾರು ಕಳಚಿಕೊಂಡಿತ್ತು. ಆದ್ದರಿಂದ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿಕೊಡುವಂತೆ ಸ್ಥಳೀಯರು ಹಾಗೂ ವಾಹನ ಸವಾರರು ಆಡಳಿತವನ್ನು ಆಗ್ರಹಿಸಿದ್ದಾರೆ.