ಕುಪ್ಪೆಪದವು: ರಿಕ್ಷಾ ಚಾಲಕರು ಅಡ್ಡಾದಿಡ್ಡಿ, ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದರಿಂದ ಸಮಸ್ಯೆ ಉಂಟಾಗುತ್ತಿದ್ದು, ಈ ಬಗ್ಗೆ ರಿಕ್ಷಾ ಚಾಲಕ ಮಾಲಕರ ಸಂಘ ಎಚ್ಚೆತ್ತುಕೊಳ್ಳುವಂತೆ ಆಕ್ಷೇಪಿಸಿದ ಘಟನೆ ಕುಪ್ಪೆಪದವು ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಕುಪ್ಪೆಪದವು ರಿಕ್ಷಾ ಚಾಲಕ ಮಾಲಕರ ಸಮಾಲೋಚನೆ ಸಭೆಯಲ್ಲಿ ಶುಕ್ರವಾರ ನಡೆದಿದೆ.
ಪಂಚಾಯತ್ ಪರವಾಗಿ ಮಾತಾಡಿದ, ಪಂಚಾಯತ್ ಉಪಾಧ್ಯಕ್ಷ ಡಿ.ಪಿ ಹಮ್ಮಬ್ಬ ಮಾತಾಡಿ, ರಿಕ್ಷಾವನ್ನು ಪಾರ್ಕಿಂಗ್ ಸ್ಥಳದಲ್ಲಿ ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತದೆ. ಈ ಬಗ್ಗೆ ಪಂಚಾಯತ್ ಕಡೆಯಿಂದ ಸಾಕಷ್ಟು ಬಾರಿ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ರಿಕ್ಷಾವನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವ ಬದಲು ಬೇರೆ ಕಡೆ ನಿಲ್ಲಿಸಿ ಬಾಡಿಗೆ ಮಾಡುವುದರಿಂದ ಇತರ ರಿಕ್ಷಾದವರಿಗೆ ಸಮಸ್ಯೆಯಾಗುತ್ತದೆ. ರಿಕ್ಷಾವನ್ನು ಎಲ್ಲೆಲ್ಲೋ ಪಾರ್ಕ್ ಮಾಡುವುದರಿಂದ ಇತರ ವಾಹನಗಳಿಗೆ, ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದು, ಇವನ್ನೆಲ್ಲಾ ಸರಿಪಡಿಸಬೇಕು ಎಂದು ತಿಳಿಸಿದರು.

ಈ ವೇಳೆ ರಿಕ್ಷಾ ಚಾಲಕ ಮಾಲಕರ ಪರವಾಗಿ ಸಂಘದ ಉಪಾಧ್ಯಕ್ಷ ಇದಿನಬ್ಬ ಪೂವನಿಬೆಟ್ಟು ಮಾತಾಡಿ, ಪಂಚಾಯತ್ನವರಿಗೆ ಕೇವಲ ರಿಕ್ಷಾದವರು ಮಾತ್ರ ಕಣ್ಣಿಗೆ ಕಾಣುತ್ತಿದ್ದಾರೆ. ಪಾರ್ಕಿಂಗ್ ನಿಯಮ ರಿಕ್ಷಾದವರಿಗೆ ಮಾತ್ರ ಅನ್ವಯಿಸುವುದಲ್ಲ, ಇತರರಿಗೂ ಅನ್ವಯಿಸುತ್ತದೆ. ಪಂಚಾಯತ್ ತಮ್ಮ ಸಮಸ್ಯೆ ಏನೆಂದು ಅರಿತುಕೊಳ್ಳುವ ಕೆಲಸವನ್ನೂ ಮಾಡಬೇಕು ಎಂದು ವಿನಂತಿಸಿದರು.
ಇದಕ್ಕೆ ಉತ್ತರಿಸಿದ ಡಿ.ಪಿ ಹಮ್ಮಬ್ಬ ಮಾತಾಡಿ, ರಿಕ್ಷಾ ಚಾಲಕ ಮಾಲಕರಿಗೆ ಪಂಚಾಯತ್ ಸ್ಪಂದಿಸುತ್ತದೆ. ರಿಕ್ಷಾ ಚಾಲಕ ಮಾಲಕರು ಸಲಹೆ ಸೂಚನೆಗಳನ್ನು ನೀಡಬಹುದು ಎಂದು ತಿಳಿಸಿದರು. ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಪಿಡಿಓ ಸವಿತಾ ಮಂದೋಲಿಕರ್, ಗ್ರಾಮ ಪಂಚಾಯತ್ ಸದಸ್ಯರು, ರಿಕ್ಷಾ ಚಾಲಕರು ಭಾಗವಹಿಸಿದ್ದರು.