ಮೂಡುಬಿದಿರೆ: ಯಕ್ಷ ಚೈತನ್ಯ ಅಶ್ವತ್ಥಪುರ ಇದರ 14ನೇ ವಾರ್ಷಿಕೋತ್ಸವದ ಅಂಗವಾಗಿ ಅಶ್ವತ್ಥಪುರ ಸಂತೆಕಟ್ಟೆಯಲ್ಲಿರುವ ತೆಂಕಮಿಜಾರು ವಿವಿಧೋದ್ದೇಶ ಸಭಾಂಗಣದಲ್ಲಿ ಯಕ್ಷನಿಧಿ ಸಮರ್ಪಣೆ, ಪ್ರತಿಭಾ ಪುರಸ್ಕಾರ ಮತ್ತು ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ತಾಳಿಪಾಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಶ್ವತ್ಥಪುರ ಶ್ರೀಸೀತಾರಾಮಚಂದ್ರ ದೇವಸ್ಥಾನದ ಪ್ರಧಾನ ಮೊಕ್ತೇಸರ ಎಲ್.ವಿ. ರಘುನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ತೆಂಕ ಮಿಜಾರು ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಪಿಡಿಒ ಸಾಯೀಶ್ ಚೌಟ, ಮಾಜಿ ಸದಸ್ಯ ಕುಂಚಿಡೇಲು ವಸಂತ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಯಕ್ಷಚೈತನ್ಯದ ಅಧ್ಯಕ್ಷ ವೇ.ಮೂ. ಪ್ರಭಾಕರ ರಾವ್ ಉಪಸ್ಥಿತರಿದ್ದರು.
ಕಟೀಲು ಮೇಳದಲ್ಲಿ ಚೆಂಡೆವಾದಕರಾಗಿರುವ ದಿವಾಣ ಶಂಕರ ಭಟ್ ಅವರನ್ನು ಸಮ್ಮಾನಿಸಲಾಯಿತು. ಲಾರಿ ಮೇಲೆ ರಂಗಸ್ಥಳ ಖ್ಯಾತಿಯ ಸಂಘಟಕ, ಕಲಾವಿದರಾಗಿದ್ದು ಅವಘಡದಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲಾಗದ ಯೋಗೀಶ ಸಾಗರ ಅವರಿಗೆ ಯಕ್ಷ ನಿಧಿಯನ್ನು ಕೆಕ್ಕಾರು ಆನಂದ ಅವರ ಮೂಲಕ ಹಸ್ತಾಂತರಿಸಲಾಯಿತು.
ತೆಂಕು ಬಡಗು ತಿಟ್ಟುಗಳ ಯುವ ಕಲಾವಿದ, ಅಶ್ವತ್ಥಪುರ ಮೂಲದ ಸಮರ್ಥ ಉಡುಪಿ ಅವರಿಗೆ ಯುವ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮವನ್ನು `ಯಕ್ಷ ಚೈತನ್ಯ’ದ ಅಧ್ಯಕ್ಷ ಕೃಷ್ಣಮೂರ್ತಿ ಕಟೀಲು ಸ್ವಾಗತಿಸಿದರು. ಸುರೇಂದ್ರ ಬಡಗಬೆಟ್ಟು ಮತ್ತು ಎಂ.ಕೆ. ಹರಿಶ್ಚಂದ್ರ ರಾವ್ ಸಮ್ಮಾನ ಪತ್ರ/ಸಾಧನಾ ಪರಿಚಯ ಪತ್ರ ವಾಚಿಸಿದರು.
ಶಿವದತ್ತ ಭಟ್ ನಿರೂಪಿಸಿದರು. ಸಂಚಾಲಕ ನೆಲ್ಲಿಮಾರು ಸದಾಶಿವ ರಾವ್ ತಾಳಮದ್ದಳೆಗಳ ಪಾತ್ರ ಪರಿಚಯ ನೀಡಿ ವಂದಿಸಿದರು.
ಬಳಿಕ `ಸಂಯಮಂ’ ಕೋಟೇಶ್ವರ ತಂಡದವರಿಂದ `ದರ್ಶನ-ಪ್ರದರ್ಶನ-ಸುದರ್ಶನ’ ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ `ತರಣಿಸೇನ ಕಾಳಗ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.