ಮೂಡುಬಿದಿರೆ: ಕಪ್ಪು ಕಲ್ಲಿನ ಕ್ರಶರ್ನಿಂದ ಸಿಡಿದ ಕಲ್ಲಿನ ತುಂಡೊಂದು ಸಮೀಪದ ಮನೆಗೆ ಬಿದ್ದು, ಮಹಿಳೆಯೋರ್ವರು ಗಂಬೀರ ಗಾಯಗೊಂಡಿರುವ ಘಟನೆ ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಶ್ವತ್ಥಪುರ ಕೊಂಡೆಬೆಟ್ಟುವಿನಲ್ಲಿ ಗುರುವಾರ ಸಂಜೆ ನಡೆದಿದೆ.

ಮಹಾಬಲ ಗೌಡ ಅವರ ಪತ್ನಿ ಚಂದ್ರಕಲಾ ಗಾಯಗೊಂಡ ಮಹಿಳೆ. ಅವರ ಮನೆ ಸಮೀಪ ಶಕ್ತಿ ಪ್ರಸಾದ್ ಎಂಬವರಿಗೆ ಸೇರಿದ ಕಪ್ಪು ಕಲ್ಲಿನ ಕ್ರಶರ್ ಕಾರ್ಯಾಚರಿಸುತ್ತಿದೆ. ಕಲ್ಲಿನ ಸ್ಪೋಟದ ಸಂದರ್ಭ ಕಲ್ಲು ಸ್ಪೋಟದ ರಭಸಕ್ಕೆ ಕಲ್ಲಿನ ತುಂಡೊಂದು ಚಂದ್ರಕಲಾ ಮನೆಯ ಮೇಲ್ಚಾವಣಿಗೆ ಬಿದ್ದಿದೆ.
ಮೇಲ್ಚಾವಣಿ ಹಾನಿಗೊಂಡು ಮನೆಯೊಳಗಿದ್ದ ಚಂದ್ರಕಲಾ ಮೇಲೆ ಕಲ್ಲು ಬಿದ್ದಿದೆ. ಘಟನೆಯಲ್ಲಿ ಮನೆಯ ಇತರ ಪರಿಕರಗಳಿಗೂ ಹಾನಿಯಾಗಿದ್ದು, ಚಂದ್ರಕಲಾ ಅವರ ಸೊಂಟ ಮತ್ತು ಕಾಲಿಗೆ ಗಂಬೀರ ಗಾಯಗಳಾಗಿದೆ. ಚಂದ್ರಕಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

