ಬಂಟ್ವಾಳ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ದಿ ಮತ್ತು ಸೃಜನಶೀಲ ಚಿಂತನ ಗುಣವನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಯೆನಪೋಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮಹಮ್ಮದ್ ಶಾಹಿದ್ ಹೇಳಿದರು.
ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ನಡೆದ ‘ವಾಣಿಜ್ಯ ವಿಷಯ ಅಧ್ಯಯನ – ಜೀವನೋಪಾಯ ಮತ್ತು ಅವಕಾಶ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ವಿದ್ಯಾರ್ಥಿ ವಾಣಿಜ್ಯ ವಿಷಯ ಕಲಿಕೆಯೊಂದಿಗೆ ಪಠ್ಯೇತರ ಕೌಶಲ್ಯಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಅಲ್ಲದೇ ಪ್ರಾಯೋಗಿಕತೆಯ ಪ್ರಯತ್ನವು ಮಾಡಬೇಕು. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕಂಪನಿಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ವೃತ್ತಿಯಲ್ಲಿ ಹಣ ಸಂಪಾದನೆಯ ಜತೆ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಕೊಂಡು ಆರ್ಥಿಕತೆಯ ಬೆಳವಣಿಗೆಗೆ ಶ್ರಮಿಸಬೇಕು. ಮೌಲ್ಯಾಧಾರಿತ, ಸೃಜನ್ಮಾತಕ ಕೌಶಲ್ಯಗಳಿಂದ ದೇಶದ ಪ್ರಗತಿ ಕಾಣಲು ಸಾಧ್ಯ ಎಂದರು.
ಎಸ್.ವಿ.ಎಸ್. ಪ.ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ವಾಣಿಜ್ಯ ಸಂಘದ ಅಧ್ಯಕ್ಷ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕ ಪ್ರವೀಣ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಾಣಿಜ್ಯ ಸಂಘದ ಕಾರ್ಯದರ್ಶಿ ಮೋಕ್ಷ ಸ್ವಾಗತಿಸಿ, ದ್ವಿತೀಯ ವಾಣಿಜ್ಯ ವಿಭಾಗದ ರಘುನಂದನ್ ರಾವ್ ಆರ್ ಬಿ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶೈಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
