ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ನವಗ್ರಹಶಾಂತಿ,ಮೃತ್ಯುಂಜಯ ಹೋಮ,ಪ್ರಾಯಶ್ಚಿತ್ತ ಹೋಮ,ಭಂಡಾರ ಮ,ನೆಯಲ್ಲಿ ಶುದ್ಧಿಕಲಶ,ನಾಗಬನದಲ್ಲಿ ಆಶ್ಲೇಷ ಬಲಿ ಪೂಜೆ ನಡೆಯಿತು.
ಆಯೋಜಿಸಲಾದ ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅವಿರತ ಕರಸೇವೆ ನಡೆಸಿದ 20 ಮಂದಿ ಹಾಗೂ ಸಹಕರಿಸಿದ 20ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಪ್ರಮುಖರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೋಣಿಂಜೆಗುತ್ತು ಟಿ. ಸುಕುಮಾರ ಶೆಟ್ಟಿ ಮಾತನಾಡುತ್ತ, ದೈವಗಳ ಕೃಪೆ ಹಾಗೂ ಊರವರ ಅಭೂತಪೂರ್ವ ಶ್ರಮದಾನ ಮತ್ತು ಒಮ್ಮತದ ಶ್ರಮದ ಫಲವಾಗಿ ಕೇವಲ 10 ತಿಂಗಳಾವಧಿಯಲ್ಲಿ ಇಷ್ಟೊಂದು ಬೃಹತ್ ಸಂಪೂರ್ಣ ಶಿಲಾಮಯ ದೈವಸ್ಥಾನ ನಿರ್ಮಾಣ ಸಾಧ್ಯವಾಯಿತು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದೋಣಿಂಜೆಗುತ್ತು ಡಾ. ರವಿ ಶೆಟ್ಟಿ ಕತಾರ್ ಮಾತನಾಡುತ್ತ, ಎಲ್ಲರ ಒಗ್ಗಟ್ಟು ಮತ್ತು ತಾಳ್ಮೆಯ ಪ್ರತೀಕವಾಗಿ ಈ ಭವ್ಯ ದೈವಸ್ಥಾನ ನಿರ್ಮಾಣಗೊಂಡಿದೆ. ಇದರ ಹಿಂದಿನ ಶ್ರಮಿಕರ ಸೇವೆ ಮರೆಯಲು ಸಾಧ್ಯವಿಲ್ಲ. ಕರಸೇವೆ ನಡೆಸಿದವರಿಗೆ ಗೌರವಾರ್ಪಣೆ ಅಭಿನಂದನೀಯ ಎಂದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಂ ಪುರಂದರ ಮಲ್ಲಿ ದೋಣಿಂಜೆಗುತ್ತು ಭಾವನಾತ್ಮಕವಾಗಿ ಮಾತನಾಡಿದರು.
ಸನ್ಮಾನಕ್ಕುತ್ತರವಾಗಿ ಮಾತನಾಡಿದ ಲೋಕೇಶ್ ಕಾಂಚನ್, ಈ ಬಾರಿ ಬಂಡಿ ಜಾತ್ರೆಗೆ ಮುಂಚೆ ಬ್ರಹ್ಮಕಲಶೋತ್ಸವ ನಡೆಯಬಹುದೇ ಎಂದು ದೈವಸ್ಥಾನಕ್ಕೆ ತಿಂಗಳ ಮುಷ್ಠಿಅಕ್ಕಿ ಸಂಗ್ರಹ ಕೆಲಸ ನಡೆಸುತ್ತಿದ್ದ ವೇಳೆ ಹಲವರು ಕೇಳಿದ್ದುಂಟು. ದೈವದ ಅನುಗ್ರಹವಿದ್ದಲ್ಲಿ ಎಲ್ಲವೂ ಅತಿ ಶೀಘ್ರ ನಡೆಯಲಿದೆ ಎಂದಿದ್ದೆ. ಅಂತೆಯೇ ಈಗ ಎಲ್ಲರ ಶ್ರಮದ ಫಲ ಹಾಗೂ ದೈವಾನುಗ್ರಹದಿಂದ ಈ ಭವ್ಯ ದೈವಸ್ಥಾನ ತಲೆ ಎತ್ತಿದ್ದು, ಎಲ್ಲರ ಸಂದೇಹಗಳು ಬಗೆಹರಿದಿರಬಹುದು ಎಂದರು.
ವೇದಿಕೆಯಲ್ಲಿ ಭಂಡಾರಮನೆಯ ಸದಾಶಿವ ಸಾಲ್ಯಾನ್ ಸಿಂಗಾಪುರ, ಗಂಗಾಧರ ಸಪಲಿಗ ಗುರುಪುರ, ಕೃಷ್ಣ ಸಾಲ್ಯಾನ್ ಗುರುಪುರ, ವಿಲಾಸ್ ಶೆಟ್ಟಿ ಮರಂಕರಿಯ, ರಾಮ ಗುರಿಕಾರ ಬಡಕರೆ ಇದ್ದರು. ಕಿಟ್ಟಣ್ಣ ರೈ ಕಾರಮೊಗರುಗುತ್ತು ಸ್ವಾಗತಿಸಿದರು. ಲಕ್ಷ್ಮಣ್ ಶೆಟ್ಟಿ ಗುರುಪುರ ಕಾರ್ಯಕ್ರಮ ನಿರೂಪಿಸಿದರೆ, ರಾಜೀವ ಶೆಟ್ಟಿ ಸಲ್ಲಾಜೆ ವಂದಿಸಿದರು.