ಬಂಟ್ವಾಳ; ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಗ್ರಾಮಪಂಚಾಯತ್ ಗಳು ಆರ್ಥಿಕವಾಗಿ ಅಶಕ್ತವಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ಗ್ರಾ.ಪಂ.ಗಳಿಗೆ ಹೆಚ್ಚಿನ ಆರ್ಥಿಕ ಅನುದಾನ ನೀಡುವ ಮೂಲಕ ಪಂಚಾಯತ್ ವ್ಯವಸ್ಥೆಗೆ ಶಕ್ತಿ ತುಂಬಬೇಕೆಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜಾ ಹೇಳಿದ್ದಾರೆ.
ಬಿ.ಸಿ.ರೋಡಿನ ಪತ್ರಿಕಾ ಪ್ರೆಸ್ಕ್ಲಬ್ ನಲ್ಲಿ ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಪಂಚಾಯತ್ನಿಂದ ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲಾಗದಂತಾ ಪರಿಸ್ಥಿತಿ ಇದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ನೀಡುವ ವಾರ್ಷಿಕ ಅನುದಾನವನ್ನು 50 ಲಕ್ಷಕ್ಕೆ ಏರಿಸಬೇಕೆಂದು ಎಂದು ಒತ್ತಾಯಿಸಿದರು. ರಾಜ್ಯದ ಶೇಕಡಾ 80 ರಷ್ಟು ಜನತೆ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆದರೆ ಸರಕಾರ ನೀಡುವ ಅನುದಾನಗಳೆಲ್ಲಾ ನಗರ ಕೇಂದ್ರಿತವಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿನ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿದೆ, ಅತ್ಯಲ್ಪ ಅನುದಾನಗಳಿಮದಾಗಿ ಪಂಚಾಯತ್ ನಿಂದ ಅಭಿವೃದ್ದಿ ಸಾಧ್ಯವಿಲ್ಲವಾಗಿದ್ದು ಬರುವ ಅನುದಾನಗಳೆಲ್ಲಾ ಮೆಸ್ಕಾಂ ಬಿಲ್, ಕುಡಿಯುವ ನೀರಿನ ನಿರ್ವಹಣೆ, ಸಿಬ್ಬಂದಿಗಳ ವೇತನಗಳಿಗಷ್ಟೇ ಸೀಮಿತವಾಗಿದೆ ಎಂದರು.
ಪಂಚಾಯತ್ ನಿಂದ ಬಾಕಿ ಇರುವ ವಿದ್ಯುತ್ ಬಿಲ್ ನ ಮೊತ್ತವನ್ನು ಮನ್ನಾ ಮಾಡುವಂತೆ ಆಗ್ರಹಿಸಿದ ಅವರು, ಹುಡ್ಕೋ, ನಾಬಾರ್ಡ್ , ವಿಶ್ವಬ್ಯಾಂಕ್, ಮಲೆನಾಡು ಅಭಿವೃದ್ದಿ, ಇವುಗಳಲ್ಲಿ ಕೆಲಸವನ್ನಾದರೂ ಗ್ರಾಮಪಂಚಾಯತ್ಗಳಿಗೆ ನೀಡಬೇಕೆಂದರು. ನಗರಪಾಲಿಕೆ ಹಾಗೂ ಪುರಸಭೆಗಳಿಗೆ ನೀಡುವ ವಿಶೇಷ ಅನುದಾನವನ್ನೂ ಪಂಚಾಯತ್ಗಳಿಗೂ ನೀಡಬೇಕೆಂದು ಪೂಂಜಾ ಒತ್ತಾಯಿಸಿದರು.
ಜನಪ್ರತಿನಿಧಿಗಳ ಮೌನ…
ಗ್ರಾಮಪಂಚಾಯತ್ ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಬೇಕಾದ ಎಲ್ಲಾ ಜನಪ್ರತಿನಿಧಿಗಳು ಮೌನವಾಗಿದ್ದಾರೆ, ಸ್ಥಳೀಯಾಡಳಿತ ಸಂಸ್ಥೆಗಳಿಂದಲೇ ಆರಿಸಲ್ಪಟ್ಟ ಪ್ರತಿನಿಧಿಗಳ ಪೈಕಿ ಜಿಲ್ಲೆಯ ಓರ್ವ ಶಾಸಕರಂತೂ ಈ ಬಗ್ಗೆ ಮಾತನಾಡದೇ ಇರುವುದು ವಿಷಾಧನೀಯ ಎಂದು ಸದಾನಂದ ಪೂಂಜಾ ಹೇಳಿದರು. ಮೀಟಿಂಗ್ ನ ನೆಪದಲ್ಲಿ ಪಂಚಾಯತ್ ಕಾರ್ಯದರ್ಶಿ  ಹಾಗೂ ಪಿಡಿಓ ಗಳಿಬ್ಬರನ್ನು ಪ್ರತಿನಿತ್ಯ ತಾಲೂಕು ಕೇಂದ್ರಕ್ಕೆ ಕರೆಸಿಕೊಳ್ಳುವುದರಿಂದ ಗ್ರಾ.ಪಂ ಗಳು ಬಾಗಿಲು ಹಾಕಬೇಕಾದ ಸ್ಥಿತಿ ಇದ್ದು, ಜನರ ಸಮಸ್ಯೆಗಳು ಪರಿಹಾರ ಕಾಣದೆ ಹಾಗೆ ಉಳಿಯುತ್ತಿದೆ, ಈ ಬಗ್ಗೆ ಜಿಲ್ಲೆಯ ಶಾಸಕರು, ಸಚಿವರು,ಸಂಸದರು ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಪೂಂಜಾ ಸಲಹೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಜಿಪಮೂಡ ಗ್ರಾ.ಪಂ.ಅಧ್ಯಕ್ಷೆ ಸುಂದರಿ, ಸದಸ್ಯರಾದ ಅಬ್ದುಲ್ ಕರೀಂ, ಯೋಗಿಶ್ ಪೂಜಾರಿ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *