ಬಂಟ್ವಾಳ : ಜಗತ್ತಿನ ಹಿಂದುಯೇತರ ಮತ ಪಂಥಗಳು ಉದಾರತೆಯನ್ನು ಒಪ್ಪಿಕೊಂಡವುಗಳಲ್ಲ. ಇಡೀ ವಿಶ್ವವೇ ಶಾಂತಯುತ ಮತ್ತು ಎಲ್ಲರೂ ಸುಖಿಗಳಾಗಿ ಬಾಳಲು ಯಾವುದೇ ಮಾರ್ಗಗಳನ್ನಾದರೂ ಅನುಸರಿಸಬಹುದು ಎಂಬ ಉದಾರವಾದಿಗಳು ಭಾರತೀಯರು ಎಂದು ಪ್ರಜ್ಞಾಪ್ರವಾಹದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕ ರಘನಂದನ್ ಹೇಳಿದರು.ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ,ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ವಿದ್ಯಾಕೇಂದ್ರದ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆದ ವಿವಿಧ ವಿಶ್ವವಿದ್ಯಾನಿಲಯಗಳರಾಜ್ಯಮಟ್ಟದ ‘ವಿಶ್ವವ್ಯಾಪಿ ಭಾರತ’ ಎಂಬ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿಅವರು ಸಮಾಪನ ಭಾಷಣಗೈದರು. 

ಭಾರತೀಯರ ವಿಶ್ವಸಂಚಾರ ಎಲ್ಲರಿಗೂ ಒಳ್ಳೆಯದನ್ನೇ ಮಾಡಿದೆ. ಯೋಗಾಸನ, ಪ್ರಾಣಾಯಾಮ, ಸಂಸ್ಕೃತಿ, ಕಲೆ, ಸಂಗೀತ, ಜೋತಿಷ್ಯ, ಆಯುರ್ವೇದ ಮುಂತಾದ ಎಲ್ಲಾ ಸಂಗತಿಗಳನ್ನು ಇಡೀ ಜಗತ್ತಿಗೆ ಪಸರಿಸಿದ ಹೆಮ್ಮೆ ಭಾರತೀಯರದು ಎಂದರು. ಯಾವ ರಾಷ್ಟ್ರ ಜಗತ್ತಿಗೆ ಮಂಗಳವನ್ನು ಬಯಸಿತೊ ಆ ರಾಷ್ಟ್ರದಲ್ಲಿರುವ ಶಸ್ತ್ರ ವಿಶ್ವಮಂಗಲದ ಉದ್ದೇಶಕ್ಕಾಗಿಯೆ ಹೊರತು ಅದೆಂದಿಗೂ ವಿಶ್ವವಿನಾಶದೆಡೆಗೆ ಸಾಗಲಾರದು. ಇಂತಹ ಪರಂಪರೆಯ ವಾರಸುದಾರರು ನಾವು ಎಂಬುದನ್ನು ನೆನಪಿನಲ್ಲಿಟ್ಟು ವ್ಯವಹರಿಸಬೇಕು ಎಂದರು.
ಶತಾವಧಾನಿ ಡಾ.ಆರ್ ಗಣೇಶ್, ಮಹಾರಾಷ್ಟ್ರದ ಔರಂಗಬಾದ್ ವಿಶ್ವವಿದ್ಯಾನಿಲಯದ ಡಾ. ಶರದ್ ಹೆಬ್ಬಾಳ್ಕರ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ,ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ವೇದಿಕೆಯಲ್ಲಿದ್ದರು. ಇದಕ್ಕು ಮೊದಲು ಎರಡನೇ ಅವಧಿಯಲ್ಲಿ ‘ಭಾರತ ವಿಶ್ವಮಾನ್ಯವಾಗುವತ್ತ’ ಎಂಬ ವಿಷಯದ ಬಗ್ಗೆ ಗುಂಪುಗಳಲ್ಲಿ ಸಂವಾದ ನಡೆಯಿತು. ಬಳಿಕ ಮುಕ್ತಚಿಂತನ- ಪ್ರಶ್ನೋತ್ತರದಲ್ಲಿ ವಿವಿಧ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಒಟ್ಟು ವಿಚಾರ ಸಂಕಿರಣದ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿನಿ ತೇಜಸ್ವಿನಿ ಪ್ರೇರಣಾ ಗೀತೆ ಹಾಡಿದರು. ಉಪನ್ಯಾಸಕಿ ಕವಿತಾ ಸ್ವಾಗತಿಸಿ, ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ವಂದಿಸಿದರು. ಉಪನ್ಯಾಸಕಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
Attachments area