ಬಂಟ್ವಾಳ:ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ವತಿಯಿಂದ ‘ಉಜ್ವಲ’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಉಚಿತ ಅಡುಗೆ ಅನಿಲ ಸಿಲಿಂಡರ್ ಸಹಿತ ಕಿಟ್ ವಿತರಣೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆರೋಪ ಕೇಳಿ ಬಂದಿದೆ.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಇತರ ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ ಕುಡ್ಮೇರು ಆಕ್ಷೇಪ ವ್ಯಕ್ತಪಡಿಸಿ, ಇದು ಕೇಂದ್ರ ಸರ್ಕಾರದ ಇಂಧನ ಇಲಾಖೆಗೆ ಸಂಬಂಧಪಟ್ಟ ಯೋಜನೆಯಾಗಿದ್ದು, ಆ ಬಗ್ಗೆ ಜಿಲ್ಲಾಧಿಕಾರಿ ನಿರ್ದೇಶನದಂತೆ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣೆ ವೇಳೆ ನಮಗೂ ಇಂತಹ ಅನುಭವ ಆಗಿದೆ ಟಾಂಗ್ ನೀಡಿದರು.

IMG_9993
ಪರೀಕ್ಷೆ ವೇಳೆ ಟೂರ್ನಮೆಂಟ್ ಬೇಡ:
ಮುಂದಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯೂಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಈ ಸಂದರ್ಭದಲ್ಲಿ ಯಾವುದೇ ಕ್ರಿಕೆಟ್, ಕಬಡ್ಡಿ ಮತ್ತಿತರ ಟೂರ್ನಮೆಂಟ್ ನಡೆಸಲು ಪರವಾನಿಗೆ ನೀಡಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿನಂತಿಸಿಕೊಂಡರು. ತಾಲ್ಲೂಕಿನಲ್ಲಿ ಒಟ್ಟು 40,393 ಮಂದಿ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಒಟ್ಟು 3,800 ಮಂದಿಗೆ ಮಂಜೂರಾಗಿದೆ. ಈಗಾಗಲೇ ಸರ್ಕಾರಿ ಶಾಲೆಗಳಿಗೆ ಒಟ್ಟು 12 ಕೋಟಿ ವೆಚ್ಚದಲ್ಲಿ ನೂತನ ಕೊಠಡಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಮದು ಅವರು ವಿವರಿಸಿದರು.
ಕಳೆದ 6 ತಿಂಗಳ ಹಿಂದೆ ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಉಚಿತ ಸೈಕಲ್ ಇದೀಗ ವಿತರಿಸಲಾಗುತ್ತಿದ್ದು, ಅದು ಕೂಡಾ ಕಳಪೆ ಮಟ್ಟದಿಂದ ಕೂಡಿದೆ ಎಂದು ಸದಸ್ಯ ರಮೇಶ ಕುಡ್ಮೇರು ಆರೋಪಿಸಿದರು. ತಾಲ್ಲೂಕಿನಲ್ಲಿ ಒಟ್ಟು 3,771 ಸೈಕಲ್ ಅಗತ್ಯವಿದ್ದು, ಕಳಪೆ ಗುಣಮಟ್ಟದ ಸೈಕಲ್ ಹಿಂತಿರುಗಿಸಲು ಶಾಲಾಭಿವೃದ್ಧಿ ಸಮಿತಿಗೆ ಅಧಿಕಾರ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು.
ಸರ್ಕಾರಿ ಶಾಲೆಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಆವರಣಗೋಡೆ ನಿರ್ಮಾಣ, ಮತದಾರರ ಪಟ್ಟಿ ಪರಿಷ್ಕರಣೆಗೆ ಅಂಗನವಾಡಿ ಕಾರ್ಯಕರ್ತೆಯರ ಬಳಕೆ, ಬೆಂಜನಪದವು ಸರ್ಕಾರಿ ಆರೋಗ್ಯ ಕೇಂದ್ರ ಸಮಸ್ಯೆ, ಬಡಗಕಜೆಕಾರು ಸ್ಮಶಾನ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿ, ಪಶುವೈದ್ಯಕೀಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ, 30 ಸಾವಿರ ಮಂದಿ ಮಕ್ಕಳಿಗೆ ಪೋಲಿಯೋ ಲಸಿಕೆ, ಗ್ರಾಮ ಪಂಚಾಯಿತಿಗೆ ವಿದ್ಯುತ್ ಬಿಲ್ಲು ಪಾವತಿ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು.
ಸದಸ್ಯರಾದ ಕೆ.ಸಂಜೀವ ಪೂಜಾರಿ, ಉಸ್ಮಾನ್ ಕರೋಪಾಡಿ, ಪ್ರಭಾಕರ ಪ್ರಭು, ಯಶವಂತ ಪೊಳಲಿ, ಹೈದರ್ ಕೈರಂಗಳ, ಪದ್ಮಶ್ರೀ ದುರ್ಗೇಶ್ ಶೆಟ್ಟಿ, ಮಂಜುಳಾ ಸದಾನಂದ ಮತ್ತುತರರು ಚರ್ಚೆಯಲ್ಲಿ ಪಾಲ್ಗೊಂಡರು.
ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ರಶ್ಮಿ ಎಸ್.ಆರ್. ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *