ಬಂಟ್ವಾಳ : ಸಂಶೋಧನೆ ಅನ್ನುವಂಥದ್ದು ಒಂದು ಕ್ಲಿಷ್ಟಕರವಾದ ವಿಷಯ. ಇದು ನಮ್ಮನ್ನು ತಾರ್ಕಿಕವಾಗಿರುವ ಅಂತಿಮ ಸತ್ಯದೆಡೆಗೆ ಕೊಂಡುಹೋಗುತ್ತದೆ. ಸತ್ಯವನ್ನು ಹುಡುಕುವ ಪ್ರಯತ್ನವೇ ಸಂಶೋಧನೆ. ನಿರಂತರವಾಗಿ ನಡೆಯುವ ಇಂತಹ ಪ್ರಯತ್ನದಿಂದ ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಲು ಉತ್ತಮವಾದ ಅವಕಾಶ ದೊರಕುತ್ತದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿ.ಇಡಿ ಕಾಲೇಜು ಇದರ ಪ್ರಾಂಶುಪಾಲ ಡಾ| ಕೆ. ನಿತ್ಯಾನಂದ ನುಡಿದರು.

ಅವರು ಶ್ರೀರಾಮ ಪದವಿ ಕಾಲೇಜಿನಲ್ಲಿ ಐಕ್ಸೂ ಎಸಿ ಸಹಯೋಗದೊಂದಿಗೆ ವಾಣಿಜ್ಯ ಹಾಗೂ ಕಲಾ ವಿಭಾಗ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧಗಳ ಪ್ರಸ್ತುತೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಂಶೋಧನೆಯ ಗುಣಮಟ್ಟ ಕೆಳಮಟ್ಟಕ್ಕೆ ತಲುಪಿದ್ದು, ಅದರ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಎಳವೆಯಲ್ಲಿ ಸಂಶೋಧನಾ ಮನಸ್ಸು ಸೃಷ್ಟಿ ಮಾಡಬೇಕು.
ಆ ನಿಟ್ಟಿನಲ್ಲಿ ಪದವಿ ಹಂತದಲ್ಲಿಯೇ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ ಎಂದರು ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ| ವಿಜಯ ಸರಸ್ವತಿ, ಬೆಳ್ತಂಗಡಿ ಪ್ರಸನ್ನ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ದಿನೇಶ್, ಎಸ್. ಡಿ. ಎಂ. ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಚಿದಾನಂದ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಉಪಸ್ಥಿತರಿದ್ದರು.
ಉಪನ್ಯಾಸಕಿ ಸುಶ್ಮಿತಾ ಮಿತ್ತೂರು ನಿರೂಪಿಸಿ, ಸ್ವರ್ಣಗೌರಿ ಸ್ವಾಗತಿಸಿ, ಸುಶ್ಮಿತಾ ಸಜಿಪ ವಂದಿಸಿದರು.ವಾಣಿಜ್ಯ ವಿಭಾಗದ 12 ವಿದ್ಯಾರ್ಥಿಗಳ 8 ತಂಡ ಹಾಗೂ ಕಲಾ ವಿಭಾಗದ 32 ವಿದ್ಯಾರ್ಥಿಗಳು ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕೊನೆಯಲ್ಲಿ ಉತ್ತಮ ಪ್ರಸ್ತುತಿಗೈದ ತಂಡವನ್ನು ಅಭಿನಂದಿಸಲಾಯಿತು.