ಸುದ್ದಿ9 ಸಿದ್ದಕಟ್ಟೆ:  ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಎಂಬಲ್ಲಿ ಮಾರಾಟ ಮಾಡಿದ ಜಮೀನಿಗೆ ಮತ್ತೆ ಅಕ್ರಮ ಬೇಲಿ ನಿರ್ಮಿಸಿ ಜೆಸಿಬಿ ಮೂಲಕ ಜಮೀನು ಅಗೆಯುತ್ತಿರುವ ದೃಶ್ಯ.
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಎಂಬಲ್ಲಿ ನೂತನವಾಗಿ ನಿರ್ಮಣಗೊಳ್ಳುತ್ತಿರುವ ಮನೆಯೊಂದರ ಗೋಡೆ ಬಳಿ ಅಕ್ರಮವಾಗಿ ಜೆಸಿಬಿ ಮೂಲಕ ಮಣ್ಣು ಅಗೆದು ಮನೆ ಕೆಡವಲು ಯತ್ನಿಸಿರುವುದು.

13btl-house

13btl-jcb
ಸಿದ್ಧಕಟ್ಟೆ: ‘ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ’
ಗೃಹ ನಿರ್ಮಾಣಕ್ಕೆ ಅಡ್ಡಿ, ಮಹಿಳೆಗೆ ಕಿರುಕುಳ ಆರೋಪ
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಎಂಬಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ 20 ಸೆಂಟ್ಸ್ ಜಮೀನಿನಲ್ಲಿ ಖರೀದಿದಾರರು ಹೊಸ ಮನೆ ನಿರ್ಮಿಸುವ ವೇಳೆ ಅಕ್ರಮವಾಗಿ ಬೇಲಿ ಹಾಕಿ ಜೆಸಿಬಿ ಮೂಲಕ ಮನೆ ಸುತ್ತಲೂ ಮಣ್ಣು ಅಗೆಯುವ ಮೂಲಕ ಒಂಟಿ ಮಹಿಳೆಗೆ ತಂಡವೊಂದು ಪದೇ ಪದೇ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಮಹಿಳೆ ದೂರು ಸಲ್ಲಿಸಿದ ಘಟನೆ ಶನಿವಾರ ನಡೆದಿದೆ.
ಆರೋಪಿಗಳನ್ನು ಸ್ಥಳೀಯ ನಿವಾಸಿ ದಿ.ಯೂಸುಫ್ ಎಂಬಾತನ ಪತ್ನಿ ಜಮೀಲ ಮತ್ತಿತರ ಆರು ಮಂದಿ ತಂಡ ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ಜಮೀನು ಖರೀದಿಸಿರುವ ಪಾಣೆಮಂಗಳೂರಿನ ನರಿಕೊಂಬು ನಿವಾಸಿ ಸತೀಶ ಸಪಲ್ಯ ಎಂಬವರ ಪತ್ನಿ ಗೀತಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಹಿನ್ನೆಲೆ:
ಕಳೆದ 2011ನೇ ಏ.28ರಂದು ಇಲ್ಲಿನ ನಿವಾಸಿ ದಿ.ಅಬ್ದುಲ್ ಖಾದ್ರಿ ಬ್ಯಾರಿ ಎಂಬವರ ಪುತ್ರ ಯೂಸುಫ್ ಎಂಬಾತನು ಪಾಣೆಮಂಗಳೂರು ಸಮೀಪದ ನರಿಕೊಂಬು ನಿವಾಸಿ ಸತೀಶ ಸಪಲ್ಯ ಎಂಬವರಿಗೆ ಸರ್ವೆ ನಂ.28/9ರಲ್ಲಿ ಒಟ್ಟು 2.21ಎಕ್ರೆ ಜಮೀನಿನಲ್ಲಿ ಕೇವಲ 20 ಸೆಂಟ್ಸ್ ಜಮೀನು ಕ್ರಯಪತ್ರ ಮೂಲಕ ಮಾರಾಟ ಮಾಡಿದ್ದನು ಎನ್ನಲಾಗಿದೆ. ಇದೇ ವೇಳೆ ಆರೋಪಿ ಯೂಸುಫ್ ತನ್ನ ತಂದೆ ಅಬ್ದುಲ್ ಖಾದ್ರಿ ಬ್ಯಾರಿಗೆ ತಾನು ಒಬ್ಬನೇ ಪುತ್ರ ಎಂದು ನಕಲಿ ದಾಖಲೆ ಸೃಷ್ಟಿಸಿ ಎಲ್ಲಾ ಜಮೀನನ್ನು ತನ್ನ ಪತ್ನಿ ಜಮೀಲನ ಹೆಸರಿಗೆ ದಾನಪತ್ರ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ, ಈತನ ಮೂವರು ಸಹೋದರ ಮತ್ತು ಸಹೋದರಿಯರು ಹೀಗೆ ಒಟ್ಟು ಆರು ಮಂದಿ ಸೇರಿಕೊಂಡು ಯೂಸುಫ್ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಆ ಬಳಿಕ ಮತ್ತೆ ಇವರೆಲ್ಲರೂ ರಾಜಿ ಮಾಡಿಕೊಂಡ ಬಳಿಕ ಯೂಸುಫ್ ತೀರಿಕೊಂಡಿದ್ದಾನೆ ಎನ್ನಲಾಗಿದೆ.
ಈ ನಡುವೆ ಸತೀಶ ಅವರು ಕಳೆದ ವರ್ಷದಿಂದ ತಾನು ಖರೀದಿಸಿದ 20 ಸೆಂಟ್ಸ್ ಜಮೀನು ಸಮತಟ್ಟುಗೊಳಿಸಿ ಹೊಸ ಮನೆ ನಿರ್ಮಿಸುತ್ತಿದ್ದು, ಉದ್ಯೋಗ ನಿಮಿತ್ತ ಗೃಹ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿ ವಿದೇಶಕ್ಕೆ ತೆರಳಿದ್ದಾರೆ. ಇದರಿಂದಾಗಿ ಆರೋಪಿ ಜಮೀಲ ಮತ್ತು ಇತರ ಆರು ಮಂದಿ ಸೇರಿಕೊಂಡು ಸತೀಶ ಅವರು ನಿರ್ಮಿಸಿರುವ ಹೊಸ ಮನೆ ಪಕ್ಕದಲ್ಲಿ ಅಕ್ರಮ ಬೇಲಿ ನಿರ್ಮಿಸಿ ಜೆಸಿಬಿ ಮೂಲಕ ಮನೆ ಸುತ್ತಲೂ ಪದೇ ಪದೇ ಮಣ್ಣು ಅಗೆಯುವ ಮೂಲಕ ಮನೆ ಕೆಡವಲು ಯತ್ನಿಸುತ್ತಿದ್ದು, ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸತೀಶರ ಪತ್ನಿ ಗೀತಾ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ನಿರ್ಲಕ್ಷ್ಯ ಆರೋಪ:
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಆರೋಪಿಗಳಿಗೆ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದು, ಸ್ಥಳ ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿಭಟನೆ ಎಚ್ಚರಿಕೆ:
ಈ ನಡುವೆ ಪ್ರಾಮಾಣಿಕವಾಗಿ ಕ್ರಯಪತ್ರ ಮೂಲಕ ಜಮೀನು ಖರೀದಿಸಿದ ಬಳಿಕ ಗೃಹ ನಿರ್ಮಾಣ ಕಾಮಗಾರಿಗೆ ಅಡ್ಡಿ ಪಡಿಸಿದ್ದಲ್ಲದೆ ಒಂಟಿ ಮಹಿಳೆಗೆ ಪದೇ ಪದೇ ಮಾನಸಿಕ ಕಿರುಕುಳ ನೀಡುತ್ತಿರುವ ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗಾಣಿಗರ ಸೇವಾ ಸಂಘ ಮತ್ತು ವಿವಿಧ ಹಿಂದೂ ಸಂಘಟನೆ ಎಚ್ಚರಿಸಿವೆ.

By suddi9

Leave a Reply

Your email address will not be published. Required fields are marked *