ಸುದ್ದಿ9:ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ ವತಿಯಿಂದ ‘ಮಕ್ಕಳ ದಿನಾಚರಣೆ’ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ತಾಲ್ಲೂಕಿನ ಎಲ್ಲಾ 18 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅ.1ರಿಂದ 30ರತನಕ ಪ್ರತ್ಯೇಕ ದಿನಗಳಲ್ಲಿ ಮೂರು ವರ್ಷ ಕೆಳಗಿನ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ನ.14ರಂದು ಬಿ.ಸಿ.ರೋಡ್ನ ಲಯನ್ಸ್ ಕ್ಲಬ್ಬಿನಲ್ಲಿ ‘ಆರೋಗ್ಯವಂತ ಶಿಶು ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಶಿವಾನಂದ ಬಾಳಿಗಾ ಹೇಳಿದ್ದಾರೆ.
ಬಿ.ಸಿ.ರೋಡ್ನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಗ್ಗೆ ಮಾಹಿತಿ ನೀಡಿದರು.
ಇದಕ್ಕಾಗಿ ಈಗಾಗಲೇ ತಾಲ್ಲೂಕಿನ 500ಕ್ಕೂ ಮಿಕ್ಕಿ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿ ಸಂಗ್ರಹ ಕೆಲಸ ನಡೆದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸಹಕಾರ ಪಡೆಯಲಾಗುತ್ತಿದೆ ಎಮದು ತಿಳಿಸಿದರು.
ತಾಲ್ಲೂಕಿನ ಪ್ರತೀ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುವ ಮಕ್ಕಳ ಆರೋಗ್ಯ ತಪಾಸಣೆ ವೇಳೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಹೆಸರು ಶಿಫಾರಸುಗೊಳಿಸಿ, ಅಂತಿಮವಾಗಿ ನ.14ರಂದು ಮತ್ತೆ ಮೂರು ಆರೋಗ್ಯ ವಂತ ಶಿಶುಗಳನ್ನು ಆಯ್ಕೆಗೊಳಿಸಿ ಬಹುಮಾನ ನೀಡಲಾಗುತ್ತದೆ. ಆರೋಗ್ಯ ತಪಾಸಣೆ ವೇಳೆ ಮಕ್ಕಳ ಹೆತ್ತವರಿಗೆ ಮಕ್ಕಳ ಪೌಷ್ಠಿಕ ಆಹಾರ ಸೇವನೆ ಬಗ್ಗೆ ವಿಶೇಷ ಮಾಹಿತಿ ನೀಡಲಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲಯನೆಸ್ ಕ್ಲಬ್ಬಿನ ಅಧ್ಯಕ್ಷೆ ಶೋಭಾ ಎಂ.ಮಾರ್ಲ, ಪ್ರಮುಖರಾದ ರೋಹಿತಾಶ್ವ, ಪಿ.ಜೆ.ರಾಡ್ರಿಗಸ್ ಮತ್ತಿತರರು ಇದ್ದರು.