ಬಂಟ್ವಾಳ: ಎರಡು ಹಂತದ ಮನೆ,ಮನೆ ಪ್ರಚಾರ ಪೂರ್ಣಗೊಂಡಿದೆ,ಪ್ರದಾನಿ ನರೇಂದ್ರಮೋದಿಯವರ ಮಂಗಳೂರು ಭೇಟಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು,ಕಾರ್ಯಕರ್ತರಲ್ಲು ಉತ್ಸಾಹ ಇಮ್ಮಡಿಗೊಂಡಿದೆ.ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ 25 ಸಾವಿರ ಮತಗಳ ಅಂತರದ ಮುನ್ನಡೆ ಗಳಿಸಲಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬಿ.ಸಿ.ರೋಡಿನಲ್ಲಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಮಂದಿ ಬಿಜೆಪಿ ಶಾಸಕರನ್ನು ಗೆಲ್ಲಿಸಿದ ದ.ಕ.ಜಿಲ್ಲೆಯ ಜನತೆ ಈ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ದಿ ಪಡಿಸಲು ಸಹಕರಿಸುವಂತೆ ಮನವಿ ಮಾಡಿದರು. ಕಳೆದ 5 ವರ್ಷದ ಪ್ರಧಾನಿ ಮೋದಿಯವರ ಆಡಳಿತದಲ್ಲಿ ದೇಶ ಸುರಕ್ಷಿತವಾಗಿದ್ದು,ವಿಶ್ವದಲ್ಲಿ ದೇಶದ ಘನತೆ ,ಗೌರವವನ್ನು ಮೆರೆದಿದೆ,ಜಿಎಸ್ ಟಿ,ನೋಟ್ ಬ್ಯಾನ್ ನಂತಹ ದಿಟ್ಟ ನಿರ್ಧಾರದಿಂದ ದೇಶದ ಆರ್ಥಿ ಕ ವ್ಯವಸ್ಥೆಯು ಗಟ್ಟಿಯಾಗಿದೆ ಎಂದ ಅವರು ಭಯೋತ್ಪಾದಕ ಚಟುವಟಿಕೆಗಳ ನಿಯಂತ್ರಣ,ಭ್ರಷ್ಟಾಚಾರ ರಹಿತ ಆಡಳಿತ,ಸ್ವಚ್ಚಭಾರತದಿಂದ ತೊಡಗಿ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯವರೆಗೆ,ಮಹಿಳೆಯರಿಗೆ ಸ್ವವಲಂಬಿ ಬದುಕು,ಮೂಲಭೂತ ಸೌಕರ್ಯ ಅಭಿವೃದ್ದಿ ಮುಂತಾದ ನೂರಾರು ಯೋಜನೆಗಳಿಂದ ದೇಶದ ಜನತೆ ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸಲು ಕಾತರದಲ್ಲಿದ್ದಾರೆ ಎಂದರು.
ದ.ಕ.ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ತನ್ನ ಸಂಸದರ ಪ್ರದೇಶಾಭಿವೃದ್ದಿ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿರುವ ನಂ.1 ಸಂಸದರಾಗಿ ಪ್ರಧಾನಿಯವರ ಕಲ್ಪನೆಯ ಸಂಸದರ ಆದರ್ಶ ಗ್ರಾಮ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದಲ್ಲಿ ಪ್ರಥಮ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿ ,ಜಿಲ್ಲೆಗೆ ಹಲವಾರು ಯೋಜನೆಗಳನ್ನು ತಂದು ಜಿಲ್ಲೆಯನ್ನು ಅಭಿವೃದ್ದಿಯಲ್ಲಿ ಮಾದರಿ ಜಿಲ್ಲೆಯನ್ನಾಗಿಸಲು ಶ್ರಮಿಸಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಹ್ಯಾಟ್ರಿಕ್ ಗೆಲುವು ನಿಶ್ಚಿತ ಎಂದರು. ಮೋದಿಗೆ ಪರ್ಯಾಯ ಇಲ್ಲ: ಹರಿಕೃಷ್ಣ. ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಬ್ಬ ಪರ್ಯಾಯ ವ್ಯಕ್ತಿಯೇ ಇಲ್ಲ..ದೇಶವನ್ನಾಳುವ ಶಕ್ತಿ ಮೋದಿಯವರಿಗೆ ಹೊರತು ವಿಪಕ್ಷದಲ್ಲಿ ಅಂತಹ ನಾಯಕರು ಯಾರಿದ್ದಾರೆ ಎಂದು ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದರು. ಪ್ರಧಾನಿಯವರ ಕಾರ್ಯ ವೈಖರಿಯಿಂದ ಯುವ ಜನಾಂಗದಲ್ಲಿ ದೇಶಭಕ್ತಿಯ ಚಿಂತನೆ ಇದ್ದು,ಈ ನಿಟ್ಟಿನಲ್ಲಿ ಪಕ್ಷ ನೋಡದೆ ರಾಷ್ಟ್ರೀಯ ಚಿಂತನೆಗೆ ಮತ ನೀಡಲಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್
ವಿಪಕ್ಷದ ನಾಯಕರು ಮೋದಿಯವರನ್ನು ಬೈಯ್ಯುವ ಭಾಷಣ ಬಿಟ್ಟರೆ ದೇಶದ ಹಿತದೃಷ್ಟಿಯಿಂದ ಅಭಿವೃದ್ದಿಯ ಚಿಂತನೆಯ ಯಾವುದೇ ಹೇಳಿಕೆಗಳು ನೀಡುತ್ತಿಲ್ಲ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದೇವದಾಸ ಶೆಟ್ಟಿ,ಪದ್ಮನಾಭಕೊಟ್ಟಾರಿ,ಅಪ್ಪಯ್ಯಮಣಿಯಾಣಿ,ಜಿ.ಆನಂದ,ರಾಮದಾಸ ಬಂಟ್ವಾಳ,ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ,ದಿನೇಶ್ ಭಂಡಾರಿ,ದೇವಪ್ಪ ಪೂಜಾರಿ ಮೊದಲಾದವರಿದ್ದರು.