ಮೂಡುಬಿದಿರೆ: ದಿಗಂಬರ ಜೈನ ಕನ್ನಡ ಮಾಧ್ಯಮ ಶಾಲೆಯ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಶಾಲಾ ಆಡಳಿತ ಮಂಡಳಿಯಿಂದ ಕೊಡುವ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು.

ಶಾಲಾ ಆಡಳಿತ ಮಂಡಳಿಯ ಪೃಥ್ವೀರಾಜ್ ಶೆಟ್ಟಿ ಅವರು ಅರ್ಹ 30 ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ನೀಡುವಂತೆ ಸಮವಸ್ತ್ರಗಳು ಹಾಗೂ ಎಮ್.ವಿ.ಶೆಟ್ಟಿ ಅಲಂಗಾರು ಮೂಡುಬಿದಿರೆ ಅವರು ನೀಡಲ್ಪಡುವ ಬರವಣಿಗೆ ಪುಸ್ತಕಗಳನ್ನುವಿತರಿಸಲಾಯಿತು.
ಶಾಲಾ ಸಂಚಾಲಕ ಕೆ.ಹೇಮರಾಜ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸುವ್ಯವಸ್ಥೆಯನ್ನು ಹೊಂದಿರುವ ಈ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಅದರ ಸದುಪಯೋಗ ಪಡೆಯಬೇಕು. ಮೂಡುಬಿದಿರೆ ವಲಯದಲ್ಲಿ ಅತ್ಯಾಧಿಕ ಮಕ್ಕಳು ದಾಖಲಾತಿ ಹೊಂದಿರುವ ಕನ್ನಡ ಮಾಧ್ಯಮ ಶಾಲೆ ಇದಾಗಿದ್ದು. ಶಾಲಾ ಆಡಳಿತ ಮಂಡಳಿ, ಹೆತ್ತವರು ಹಾಗೂ ಶಿಕ್ಷಕ ವೃಂದದ ಸಹಕಾರವೇ ಕಾರಣ ಎಂದು ಹೇಳಿದರು.
ಮುಖ್ಯ ಶಿಕ್ಷಕ ಶಶಿಕಾಂತ ವೈ. ಪ್ರಾಸ್ತಾವಿಕವಾಗಿ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲೆಯಲ್ಲಿ 27 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಶಾಲಾ ವಿದ್ಯಾರ್ಥಿಗಳ ಸಂಖ್ಯೆ 300ರ ಗಡಿ ದಾಟಿರುವ ಬಗ್ಗೆ ತಿಳಿಸಿ ಹರ್ಷ ವ್ಯಕ್ತ ಪಡಿಸಿದರು.
ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೆ. ರವಿಪ್ರಸಾದ್ ಶೆಟ್ಟಿ, ಎಂ.ವಿ ಶೆಟ್ಟಿ, ಜಗದೀಶ್ ನಾಯಕ್ ಉಪಸ್ಥಿತರಿದ್ದರು.
ಸಹಾಯಕ ಶಿಕ್ಷಕಿ ತ್ರಿಶಲಾ ಸ್ವಾಗತಿಸಿದರು. ಸಹಶಿಕ್ಷಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ನಾಗವರ್ಮ ಜೈನ್ ವಿದ್ಯಾರ್ಥಿಗಳ ವಿವರ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ಅಜ್ರಿ ವಂದಿಸಿದರು.