ಬಂಟ್ವಾಳ: ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಶಾಖೆಯ 2019 -2024 ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿಗಾಗಿ ಚುನಾವಣೆ ಗುರುವಾರ ಬಿ.ಸಿ.ರೋಡಿನಲ್ಲಿರುವ ಸರಕಾರಿ ನೌಕರರ ಭವನದಲ್ಲಿ ನಡೆಯಿತು. 24 ಇಲಾಖೆಯನ್ನೊಳಗೊಂಡು ಕಾರ್ಯಕಾರಿ ಸಮಿತಿಗೆ ಒಟ್ಟು 35 ಪ್ರತಿನಿಧಿಗಳು ಆಯ್ಕೆಯಾಗಬೇಕಾಗಿದೆ.ಈ ಪೈಕಿ 12 ಇಲಾಖೆಗಳ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು,10 ಇಲಾಖೆಯಿಂದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದರೆ ಉಳಿದಂತೆ ಕಂದಾಯ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಪ್ರತಿನಿಧಿಗಳ ಆಯ್ಕೆಗಾಗಿ ಚುನಾವಣೆ ನಡೆಯಿತು.
ಕಂದಾಯ ಇಲಾಖೆ ಯಿಂದ ಇಬ್ಬರು ಪ್ರತಿನಿಧಿಗಳಿಗಾಗಿ ಐವರು ,ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ 3 ಮಂದಿ ಪ್ರತಿನಿಧಿಗಳಿಗಾಗಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದರು.

ಬೆಳಿಗ್ಗೆ 11 ರಿಂದ ಸಂಜೆ 4 ,ಗಂಟೆಯವರೆಗೆ ಚುನಾವಣೆ ನಡೆದಿದ್ದು,ಬಳಿಕ ಮತ ಎಣಿಕೆ ನಡೆಯಿತು.ಕಂದಾಯ ಇಲಾಖೆಯಿಂದ ಜನಾರ್ದನ ಮತ್ತು ಮಂಜುನಾಥ್ ಅವರು ಚುನಾಯಿತರಾದರೆ,ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಪ್ರಾನ್ಸಿಸ್ ಡೇಸಾ,ರವಿಕುಮಾರ್ ಮತ್ತು ಸಂತೋಷ ಕುಮಾರ್ ಅವರು ಆಯ್ಕೆಗೊಂಡಿದ್ದಾರೆ.
ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ನಾಯಕ್ ರಾಯಿ ಚುನಾವಣಾಧಿಕಾರಿಯಾಗಿ ಹಾಗೂ ಕೊಡಂಗೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಭಾಸ್ಕರ್ ರಾವ್ ಮತಗಟ್ಟೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜೂ. 27 ರಂದು ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ನೂತನ ಪದಾಧಿಕಾರಿ ಚುನಾವಣೆ ನಡೆಯಲಿದೆ.
