ಮೂಡುಬಿದಿರೆ ಜೈನಪೇಟೆಯಲ್ಲಿರುವ ಶ್ರೀಮೂಡುಬಿದಿರೆ ದಿಗಂಬರ ಜೈನ ವಿದ್ಯಾವರ್ಧಕ ಸಂಘದಿಂದ ಅಧೀನದ ಜೈನ ಪ್ರೌಢಶಾಲೆಯ 2019-20 ಸಾಲಿನ ಶಾಲಾ ಸಂಸತ್ತು ಚುನಾವಣೆಯಲ್ಲಿ ಇವಿಎಂ ಮೆಷಿನ್ ಬಳಕೆ ಮಾಡಲಾಗಿದ್ದು, ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿಯನ್ನು ವಿಶೇಷವಾಗಿ ಮಾಡಲಾಯಿತು.
1944ರಲ್ಲಿ ಪ್ರಾರಂಭವಾಗಿರುವ ಜೈನ ಪ್ರೌಢಶಾಲೆಯಲ್ಲಿ ಪ್ರತಿವರ್ಷ ಚುನಾವಣೆ ನಡೆಯುತ್ತಿದ್ದು, ಈ ಬಾರಿ ಇವಿಎಂ ಮೆಷಿನ್ ಬಳಕೆ ಮಾಡುವ ಮೂಲಕ ಗಮನಸೆಳೆದಿದೆ. ಶಾಲೆಯ ಚುನಾವಣೆ ಸಾಕ್ಷರತಾ ಸಂಘದ ನೇತೃತ್ವದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರ ವಿಶೇಷ ಮುತುವರ್ಜಿಯಲ್ಲಿ ನಡೆದ ಚುನಾವಣೆಗೆ ಎಸ್ಡಿಎಂ ಪಾಲಿಟೆಕ್ನಿಕ್ನ ಇನ್ನೊವೇಟಿವ್ ಕ್ಲಬ್ನವರು ತಯಾರಿಸಿದ ಇವಿಎಂ ಮೆಷಿನ್ ಅನ್ನು ಬಳಕೆ ಮಾಡಲಾಗಿದೆ.
ಮೇ 31ರಂದು ಶಾಲೆ ಸಂಸತ್ತಿಗೆ ಚುನಾವಣೆ ಘೋಷಣೆ ಮಾಡಲಾಗಿದ್ದು, ಜೂನ್ 6ರಂದು ನಾಮಪತ್ರ ಸಲ್ಲಿಕೆ, ಜೂನ್ 7ರಂದು ನಾಮಪತ್ರ ಪರಿಶೀಲನೆ, ಜೂನ್ 8ರಂದು ನಾಮಪತ್ರ ಹಿಂಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಜೂನ್ 10ರಿಂದ 13ರಂದು ಅಭ್ಯರ್ಥಿಗಳು ತರಗತಿಗಳಿಗೆ ತೆರಳಿ ಚುನವಣಾ ಪ್ರಚಾರ ಮಾಡಿದರು. ಜೂನ್ 15ರಂದು ಚುನಾವಣೆ ನಡೆದಿದೆ.
610 ವಿದ್ಯಾರ್ಥಿಗಳಿಂದ ಮತದಾನ:
ಶಾಲೆಯ 8ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ 645 ಮಂದಿ ಇವಿಎಂ ಮೆಷಿನ್ ಮೂಲಕ ಮತದಾನ ಮಾಡಿದರು. ಶಾಲೆಯ ನಾಯಕ(ಮುಖ್ಯಮಂತ್ರಿ) ಆಯ್ಕೆಗೆ ನಾಲ್ಕು ಮಂದಿ ಸ್ಪರ್ಧಿಸಿದ್ದರು. ಕ್ರಮ ಸಂಖ್ಯೆ 1ರಲ್ಲಿ 10ನೇ ತರಗತಿ ಎ ವಿಭಾಗದ ಅದಿತಿ ಪುಸ್ತಕದ ಚಿಹ್ನೆ, ಕ್ರಮ ಸಂಖ್ಯೆ 2ರಲ್ಲಿ ಅದೇ ತರಗತಿಯ ಮನಿತ್ ಕೈಗಡಿಯಾರ ಚಿಹ್ನೆ, ಕ್ರಮ ಸಂಖ್ಯೆ 3ರಲ್ಲಿ ಅದೇ ತರಗತಿಯ ನಿರ್ದೇಶ್ ಕೊಡೆ ಚಿಹ್ನೆ ಹಾಗೂ ಕ್ರಮ ಸಂಖ್ಯೆ 4ರಲ್ಲಿ 10ನೇ ತರಗತಿ ಬಿ ವಿಭಾಗದ ಪ್ರನೀತ್ ಸೈಕಲ್ ಚಿಹ್ನೆಯು ಇವಿಎಂ ಮೆಷಿನ್ನಲ್ಲಿ ನಮೂದಿಸಲಾಗಿದ್ದು, ಅದರ ಎದುರು ಬಟನ್ಗಳನ್ನು ಅಳವಡಿಸಲಾಗಿತ್ತು. ಕ್ರಮ ಸಂಖ್ಯೆ 5ರಲ್ಲಿ ನೋಟಾ ಮತದಾನಕ್ಕೆ ಅವಕಾಶ, ಯಾವ ಅಭ್ಯರ್ಥಿಗೆ ಮತದಾನ ಮಾಡಿದ್ದೇವೆ ಎಂದು ಖಾತ್ರಿಪಡಿಸಲು ಮೆಷಿನ್ನಲ್ಲಿ ಸ್ಕ್ರೀನ್ ಅಳವಡಿಸಿರುವುದು ವಿಶೇಷ.
ಚುನಾವಣಾ ಸಾಕ್ಷರತಾ ಸಂಘದ ಮಾರ್ಗದರ್ಶಕ ಶೇಖರ ಮತಗಟ್ಟೆಯ ಮೇಲ್ವಿಚಾರಣಾ ಆಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರೆ, ಪೋಲಿಂಗ್ ಅಧಿಕಾರಿಯಾಗಿ ಶಿಕ್ಷಕರಾದ ನಮೃತಾ, ದೇವದಾಸ, ನವೀನ್ ಬಂಗೇರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಇಡೀ ಚುನಾವಣೆಯ ವ್ಯವಸ್ಥೆಯನ್ನು ಶಿಕ್ಷಕರಾದ ವಿನಯಚಂದ್ರ, ನಿತೇಶ್ ಬಲ್ಲಾಳ್ ನಿರ್ವಹಿಸಿದರು. ಎನ್ಸಿಸಿ ಕೆಡೆಟ್ಗಳು ಪೊಲೀಸರ ಮಾದರಿಯಲ್ಲಿ ಚುನಾವಣೆ ಶಿಸ್ತುಬದ್ಧವಾಗಿ, ವ್ಯವಸ್ಥಿತ ರೀತಿಯಲ್ಲಿ ನಡೆಯಲು ಶ್ರಮಿಸಿದರು.
ಮತದಾನದ ಮೊದಲು ಮಾದರಿ ಮತದಾನವನ್ನು ಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಉದ್ಘಾಟಿಸಿದರು. ಎಸ್ಡಿಎಂ ಪಾಲಿಟೆಕ್ನಿಕ್ನ ಉಪನ್ಯಾಸಕರಾದ ಮಿಥನ್, ಪ್ರಭಾಕರ್ ಸಂಪತ್, ನಿತಿನ್ ಉಪಸ್ಥಿತರಿದ್ದರು.
—
ಮನೀತ್ಗೆ ಗೆಲುವು:
ಅತೀ ಹೆಚ್ಚು ಮತ ಪಡೆದ ಮನೀತ್ ಗೆಲುವು ಸಾಧಿಸಿದ್ದು, ಶಾಲಾ ವಿದ್ಯಾರ್ಥಿಯಾಗಿ ಆಯ್ಕೆಯಾಗಿದ್ದಾನೆ. 610
ಮತಗಳಲ್ಲಿ 233 ಮತಗಳನ್ನು ಮನೀತ್ ಪಡೆದುಕೊಂಡರೆ, ಪ್ರನೀತ್ 203, ಅದಿತಿ 136, ನಿರ್ದೇಶ್ 12 ಗಳಿಸಿದ್ದಾರೆ. 26 ನೋಟಾ ಮತಗಳು ಚಲಾವಣೆಯಾಗಿವೆ. ಮನೀತ್ ಶಾಲಾ ಮುಖ್ಯಮಂತ್ರಿ ಆಯ್ಕೆಯಾದರೆ, ದ್ವಿತೀಯ ಸ್ಥಾನ ಪಡೆದ ಪ್ರನೀತ್ ಉಪಮುಖ್ಯಮಂತ್ರಿ, ತೃತೀಯ ಸ್ಥಾನ ಪಡೆದ ಅದಿತಿ ವಿರೋಧಪಕ್ಷದ ನಾಯಕಿ, ನಿದೇಶ್ ವಿರೋಧಪಕ್ಷದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.



