ಬಂಟ್ವಾಳ:ಟ್ರಾಫಿಕ್ ಪೊಲೀಸರು ಕಳೆದು ಎರಡುದಿನಗಳಿಂದ ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಟೆಂಪೋ, ಆಟೋರಿಕ್ಷಾಗಳ ವಿರುದ್ದ ಪ್ರಕರಣ ದಾಖಲಿಸುತ್ತಿರುವ ಹಿನ್ನಲೆಯಲ್ಲಿ ಶನಿವಾರ ಚಾಲಕರು ದಿಢೀರ್ ಪ್ರತಿಭಟನೆಗೆ ಇಳಿದ ಘಟನೆ ಬಂಟ್ವಾಳ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲಾ ಬಳಿ ನಡೆಯಿತು. ಈ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರನ್ನು ಚಾಲಕರು ತರಾಟೆಗೂ ತೆಗೆದುಕೊಂಡರಲ್ಲದೆ ಶಾಲಾಮಕ್ಕಳ ಸಾಗಾಟವನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೀಡಿದರು. ಇದೇ ವೇಳೆ ಈ ರಸ್ತೆಯಾಗಿ ಬಂದ ತಹಶೀಲ್ದಾರ್ ರಶ್ಮೀ ಎಸ್.ಆರ್. ಅವರನ್ನು ಭೇಟಿಯಾದ ಚಾಲಕ ಸಮುದಾಯ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ಸಂಚಾರ ಕಾನೂನಿನಲ್ಲಿ ಸಡಿಲಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಪೋಲೀಸರ ಈ ಕ್ರಮದಿಂದ ದುಡಿಮೆ ಮಾಡಲು ತೊಂದರೆಯಾಗುತ್ತಿದೆ. ವರ್ಷಕ್ಕೆ 33 ಸಾವಿರ ತೆರಿಗೆ ಪಾವತಿಸುತ್ತೆವೆ. ಆರ್.ಟಿ.ಒ.ಪ್ರಕಾರ ಟೆಂಪೋದಲ್ಲಿ 12 ಸೀಟುಗಳಿದ್ದು, 25ಮಂದಿ ಶಾಲಾ ಮಕ್ಕಳನ್ನು ಸಾಗಿಸುತ್ತೇವೆ.
ಇಷ್ಟು ದುಬಾರಿ ತೆರಿಗೆ ಪಾವತಿಸಿ 12 ಮಕ್ಕಳ ಸಾಗಾಟ ಮಾಡಿದರೆ ನಮಗೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಕಾನೂನಿನಲ್ಲಿ ಅಥವಾ ಸಂಚಾರಿ ನಿಯಮದಲ್ಲಿ ತುಸು ರಿಯಾಯತಿ ನೀಡಬೇಕು ಎಂದು ಒತ್ತಾಯಿಸಿದರು..
ಇದೇ ರೀತಿ ಮುಂದುವರಿದರೆ ನಾವು ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಎಂದು ಮನವರಿಕೆ ಮಾಡಿದರು..
ಈ ಬಗ್ಗೆ ಎ.ಎಸ್.ಪಿ.ಜೊತೆ ಚರ್ಚಿಸಿ ವಿಶೇಷ ಸಭೆ ಕರೆಯುವುದಾಗಿ ತಹಶೀಲ್ದಾರ್ ಅವರು ಚಾಲಕ ಸಮುದಾಯಕ್ಕೆ ಭರವಸೆ ನೀಡಿದರು.ಪೊಲೀಸರ ಈ ಕ್ರಮಕ್ಕೆ ಶಾಲಾ ಮಕ್ಕಳ ಪೊಷಕರಿಂದಲೂ ಅಸಮಾಧಾನ ವ್ಯಕ್ತವಾಗಿದೆ.