ಬಂಟ್ವಾಳ : ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ವಾಣಿಜ್ಯಶಾಸ್ತ್ರ ವಿಭಾಗ, ಅರ್ಥಶಾಸ್ತ್ರ ಯೋಜನಾ ವೇದಿಕೆ ಹಾಗೂ ಲರ್ನರ್ಸ್ ಫೋರಂ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಬಜೆಟ್ ೨೦೧೯-೨೦ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಸೋಮವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸಹಾಯಕ ಪ್ರಾಧ್ಯಾಪಕಿ ಸೌಮ್ಯ ಎಚ್.ಕೆ. ಅವರು ಕೇಂದ್ರ ಬಜೆಟ್ ೨೦೧೯-೨೦ರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಣಾ ಇಲಾಖೆಯ ಪ್ರಸ್ತಾವಗಳು ಹಾಗೂ ಬಜೆಟ್ ಹಂಚಿಕೆ ಕುರಿತು ಸಹಾಯಕ ಪ್ರಾಧ್ಯಾಪಕ ವಿನಯ್ ಎಂ.ಎಸ್ ಮಾಹಿತಿ ನೀಡಿದರು.
ಸಹಾಯಕ ಪ್ರಾಧ್ಯಾಪಕ ಹನುಮಂತಯ್ಯ ಜಿ.ಎಚ್ ಅವರು ನೇರ ಹಾಗೂ ಪರೋಕ್ಷ ತೆರಿಗೆಗಳ ಕುರಿತು ಬಜೆಟ್ ಹಂಚಿಕೆಯನ್ನು ವಿವರಿಸಿದರು. ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಪ್ರಸ್ತುತ ಬಜೆಟ್ ಹಂಚಿಕೆಯನ್ನು ಸಹಾಯಕ ಪ್ರಾಧ್ಯಾಪಕ ಸುಂದ್ರೇಶ್ ಎನ್. ತಿಳಿಸಿದರು. ಮೂಲಭೂತ ಸೌಕರ್ಯಗಳು ಹಾಗೂ ಮಹಿಳಾ ಪರ ಕಾರ್ಯಕ್ರಮಗಳ ಬಜೆಟ್ ಪ್ರಸ್ತಾವನೆಯನ್ನು ಸಹಾಯಕ ಪ್ರಾಧ್ಯಾಪಕಿ ನಸೀಮಾ ಬೇಗಂ ಎಸ್. ವಿವರಿಸಿದರು. ಸಹಾಯಕ ಪ್ರಾಧ್ಯಾಪಕಿ ದೇವಿ ಪ್ರಸಾದ್ ಅವರು ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಬಜೆಟ್ ಹಂಚಿಕೆ ಹಾಗೂ ಬದಲಾವಣೆಗಳನ್ನು ಹಂಚಿಕೊಂಡರು.
ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿ, ಬಜೆಟ್ ಸರಕಾರದ ವಾರ್ಷಿಕ ಆಯವ್ಯಯ ಪಟ್ಟಿಯಾಗಿದ್ದು, ಸಂಪ್ರದಾಯದಂತೆ ಕೇಂದ್ರ ಹಣಕಾಸು ಮಂತ್ರಿ ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುತ್ತಾರೆ. ಹೀಗೆ ಅನುಮೋದನೆ ಪಡೆದ ಹಣಕಾಸು ಹಾಗೂ ಬಳಕೆಗೆ ಸಂಬಂಧಿಸಿದ ವಾರ್ಷಿಕ ಆದಾಯ ಮತ್ತು ಖರ್ಚು ವೆಚ್ಚಗಳ ಪಟ್ಟಿಯನ್ನು ಮುಂದಿನ ಹಣಕಾಸು ವರ್ಷದಲ್ಲಿ ಜಾರಿಗೊಳಿಸಲಾಗುತ್ತದೆ ಎಂದರು. ವಿದ್ಯಾರ್ಥಿಗಳಾದ ಮನೀಶ್ ಪ್ರಾರ್ಥಿಸಿ, ಶುಭಾನಿ ಸ್ವಾಗತಿಸಿ, ರಾಜೇಶ್ ವಂದಿಸಿದರು. ನಿಶ್ವಿತಾ ನಿರೂಪಿಸಿದರು