ಬಂಟ್ವಾಳ: ತೆರಿಗೆಯ ಜೊತೆಗೆಕಸ ಸಂಗ್ರಹಣೆಗೆ ಅಡ್ವಾನ್ಸ್ ಶುಲ್ಕ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿ ಪುರವಾಸಿಗಳು,ವರ್ತಕರು ಸಮಾನ ಮನಸ್ಕ ಸಂಘಟನೆಯಡಿಯಲ್ಲಿ ಬಂಟ್ವಾಳ ಪುರಸಭೆಯ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.ಬಂಟ್ವಾಳ ಪುರಸಭಾ ಆಡಳಿತವು ತ್ಯಾಜ್ಯ ವಿಲೇವಾರಿಗೆ ಸಾರ್ವತ್ರಿಕವಾಗಿ ಕಸ ಸಂಗ್ರಹಣಾ ಶುಲ್ಕವನ್ನು ವಿಧಿಸುವುದನ್ನು ನಿಲ್ಲಿಸಬೇಕು ಎಂದು ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪುರಸಭೆ ಮುಖ್ಯಾಧಿಕಾರಿ ಮೂಲಕ ಮನವಿ ಮಾಡಿದ ಪ್ರತಿಭಟನಾಕಾರರು, ವಾರದೊಳಗೆ ಇತ್ಯರ್ಥ ಮಾಡದಿದ್ದಲ್ಲಿ ಉಪವಾಸ ಸತ್ಯಾಗ್ರಹದಂಥ ಉಗ್ರ ಹೋರಾಟ ನಡೆಸುವ ಹಾಗೂ ಜಿಲ್ಲಾಧಿಕಾರಿ ಬರುವವರೆಗೂ ರಸ್ತೆ ತಡೆ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯರೂ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರೂ ಆಗಿರುವ ಬಿ.ವಾಸು ಪೂಜಾರಿ ,ಸಮಾನ ಮನಸ್ಕ ಸಂಘಟನೆಯ ಸಂಚಾಲಕ ಬಿ.ಶೇಖರ್, ಉಪಸಂಚಾಲಕ ಪ್ರಭಾಕರ ದೈವಗುಡ್ಡೆ, ರಾಮಣ್ಣ ವಿಟ್ಲ ಮಾತನಾಡಿದರು. ಪುರಸಭೆ ಸದಸ್ಯರಾದ ಪಿ.ರಾಮಕೃಷ್ಣ ಆಳ್ವ, ಮಹಮ್ಮದ್ ಶರೀಫ್, ಮುನೀಶ್ ಆಲಿ, ಇದ್ರೀಸ್, ಗಂಗಾಧರ ಪೂಜಾರಿ, ವಿವಿಧ ಪಕ್ಷ, ಸಂಘಟನೆಗಳ ಪ್ರಮುಖರಾದ ಹಾರೂನ್ ರಶೀದ್, ಉದಯಕುಮಾರ್, ಸಾದಿಕ್ ಬಡ್ಡಕಟ್ಟೆ, ಸುರೇಶ್ ಕುಮಾರ್ , ಹೈದರ್ ಬಂಟ್ವಾಳ ಹಾಗೂ ಬಂಟ್ವಾಳ, ಬಿ.ಸಿ.ರೋಡ್ ಪರಿಸರದ ವರ್ತಕರು, ನಾಗರಿಕರು ಉಪಸ್ಥಿತರಿದ್ದರು. ಬಳಿಕ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
