ಬಂಟ್ವಾಳ: ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿಜ್ಞಾನ ಸಂಘದ ಜಂಟಿ ಆಶ್ರಯದಲ್ಲಿ ಡೆಂಗ್ಯೂ ಮಾಹಿತಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಉಪನ್ಯಾಸ ಬಂಟ್ವಾಳ ಎಸ್.ವಿ.ಎಸ್ ಪದವಿ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ವಿನಾಯಕ ಕೆ.ಎಸ್ ಇವರು ಈಡಿಸ್ ಮತ್ತು ಈಜಿಪ್ಟಿ ಎಂಬ ಸೊಳ್ಳೆಯಿಂದ ಹರಡುವ ಡೆಂಘಿ ಜ್ವರದ ಲಕ್ಷಣಗಳು, ಅದರ ಹರಡುವಿಕೆ ಮತ್ತು ಪರಿಣಾಮಗಳು, ರೋಗಿ ಅನುಸರಿಸಬೇಕಾದ ಕ್ರಮಗಳು ಮತ್ತು ಅದರ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಪ್ರೀತ್ ಕಾಡಕೊಳ್ ಇವರು ರೋಗಕಾರಕ ಸೊಳ್ಳೆಗಳ ಗುಣಲಕ್ಷಣಗಳನ್ನು ತಿಳಿಸುವುದರ ಜೊತೆಗೆ ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗೋಪಾಯಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮಾತನಾಡಿ, ಡೆಂಘಿ, ಮಲೇರಿಯಾ ಮುಂತಾದ ರೋಗಗಳನ್ನು ಸರಿಯಾಗಿ ಅರಿತು ಅವುಗಳ ತಡೆಗಟ್ಟುವಿಕೆಯಲ್ಲಿ ಸಕ್ರಿಯವಾಗಿ ಕೈಜೋಡಿಸುವುದರ ಮೂಲಕ ಜಾಗೃತ ನಾಗರಿಕರಾಗಬೇಕೆಂದು ಕರೆಯಿತ್ತರು. ಕಾರ್ಯಕ್ರಮದ ಸಂಯೋಜಕರುಗಳಾದ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ| ಮಂಜುನಾಥ ಉಡುಪ ಹಾಗೂ ಶ್ರೀಮತಿ ಶಶಿಕಲಾ ಎಮ್ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು| ಕಾವ್ಯಾ ಪ್ರಭು ಸ್ವಾಗತಿಸಿದರು. ಎನ್.ಎಸ್.ಎಸ್ ಘಟಕ ನಾಯಕಿ ಕು| ಗೌತಮಿ ವಂದಿಸಿದರು. ಸ್ವಯಂ ಸೇವಕ ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು.