ವಿಟ್ಲ: ಕಳೆದ ಹತ್ತು ವರ್ಷಗಳ ಹಿಂದೆ ಬಾವಿ ಕೆಲಸದಲ್ಲಿ ನಿರತರಾಗಿದ್ದ ಕರುಣಾಕರ ಪೂಜಾರಿ ನವಗ್ರಾಮ ಮಂಗಳಪದವು ಇವರು ಆಕಸ್ಮಿಕವಾಗಿ ಬಾವಿಯ ಮೇಲಿನಿಂದ ಬಿದ್ದ ಕಾರಣ ಬೆನ್ನುಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಹತ್ತು ವರ್ಷಗಳಿಂದಲೂ ಮಲಗಿದ ಸ್ಥಿತಿಯಲ್ಲಿದ್ದಾರೆ.
ತನ್ನ ದೈನಂದಿನ ಚಟುವಟಿಕೆಗಳನ್ನು ಕೂಡ ಹಾಸಿಗೆಯಲ್ಲಿಯೇ ನಡೆಸುತ್ತಿದ್ದು ಮನೆಯ ಆಧಾರ ಸ್ತಂಬವೇ ಕಳಚಿದಂತಾಗಿದೆ. ಪ್ರಸ್ತುತ ಇವರ ಚಿಕಿತ್ಸಾವೆಚ್ಚ, ಮೂರು ಹೆಣ್ಣುಮಕ್ಕಳ ಜವಾಬ್ದಾರಿಯನ್ನು ಇವರ ಧರ್ಮಪತ್ನಿ ನಿಭಾಯಿಸುತ್ತಿದ್ದು ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ನೆರವು ನೀಡಲೆಂದೇ ರೂಪುಗೊಂಡಿರುವಂತಹ ತಂಡವೇ ” ಸ್ಪಂದನ ಗುರುತು ವಿಟ್ಲ ” ಈ ತಂಡದ ಸದಸ್ಯರು ಕರುಣಾಕರ ಪೂಜಾರಿ ಯವರ ಪರಿಸ್ಥಿತಿಯನ್ನು ಪರಿಶೀಲಿಸಿ ಆ.18 ರಂದು ಅವರ ಮನೆಗೆ ಭೇಟಿ ನೀಡಿ “ಸ್ಪಂದನ ಗುರುತು “ತಂಡದ ಹೆಸರಿನ ರೂಪಾಯಿ 10,000ದ ಚೆಕ್ಕನ್ನು ಹಸ್ತಾಂತರಿಸುವ ಮೂಲಕ ತಂಡವು ತನ್ನ ಪ್ರಥಮ ಹೆಜ್ಜೆ ಇಟ್ಟಿದೆ.