ಬಂಟ್ವಾಳ :ತಾಲ್ಲೂಕಿನ ರಾಯಿ ಸಮೀಪದ ಮಾನಡ್ಕ-ರಾಮೇರು ಗಿರಿಜನ ಕಾಲೊನಿ ರಸ್ತೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಗುಡ್ಡವೊಂದು ಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಆರೋಪಿಸಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾನಡ್ಕ-ರಾಮೇರು ರಸ್ತೆಯನ್ನು ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಸುವರ್ಣ ಗ್ರಾಮ ಯೋಜನೆಯಡಿ ಜೆಸಿಬಿ ಮೂಲಕ ಸಮತಟ್ಟುಗೊಳಿಸಿ ಡಾಂಬರೀಕರಣಗೊಳಿಸಿಲ್ಲ. ಇದರಿಂದಾಗಿ ಮಳೆಗೆ ಎತ್ತರದ ಗುಡ್ಡದ ಮಣ್ಣು ರಸ್ತೆಗೆ ಪದೇ ಪದೇ ಕುಸಿದು ಬೀಳುತ್ತಿದೆ. ಇದೀಗ ಸ್ಥಳೀಯರಿಗೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಸುಮಾರು ಐವತ್ತಕ್ಕೂ ಮಿಕ್ಕಿ ಮನೆಗಳಿಂದ ಪ್ರತಿದಿನ ಸಂಚರಿಸುವ ವಿದ್ಯಾರ್ಥಿಗಳು ಮತ್ತು ಹೈನುಗಾರರು ಹಾಗೂ ಕೃಷಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರಿಕೊಂಡರೂ ಯಾವುದೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಬಗ್ಗೆ ತಕ್ಷಣವೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ರಸ್ತೆಗೆ ಕುಸಿದ ಮಣ್ಣು ತೆರವುಗೊಳಿಸುವುದರ ಜೊತೆಗೆ ಕುಸಿತದ ಭೀತಿ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಸಂತ ಗೌಡ ಮುದ್ದಾಜೆ, ಪ್ರಮುಖರಾದ ಲಕ್ಷ್ಮಣ, ರಾಜೇಶ, ನವೀನಚಂದ್ರ ಗೌಡ, ದುಗ್ಗಮ್ಮ, ನಿರೀಕ್ಷ, ಶುಭಲತ, ಸುಪ್ರಿಯಾ ಮತ್ತಿತರರು ಪಾಲ್ಗೊಂಡಿದ್ದರು.