ಅಡ್ಯನಡ್ಕ: ಇಲ್ಲಿನ ಜನತಾ ವಿದ್ಯಾಸಂಸ್ಥೆಯಲ್ಲಿ 'ಮಳೆಕೊಯ್ಲು' ಬಗ್ಗೆ ಮಾಹಿತಿ ಕಾರ್ಯಕ್ರಮವು ನಡೆಯಿತು. ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ. ಬಾಯಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಓಡುವ ಮಳೆಯನ್ನು ನಾಳೆಗಾಗಿ ತಡೆಹಿಡಿಯುವುದೇ ಮಳೆಕೊಯ್ಲು.
ಭೂಮಿಗೆ ತಲುಪಿದ ನೀರಿನ ನಾಲ್ಕನೇ ಒಂದಂಶ ಇಂಗುವಂತಾದರೆ ಜಲಕ್ಷಾಮವನ್ನು ತಪ್ಪಿಸಬಹುದು ಎಂದು ಅವರು ತಿಳಿಸಿದರು. ವೀಡಿಯೋ ಚಿತ್ರ ಪ್ರದರ್ಶನ ಮತ್ತು ಸಂವಾದದ ಮೂಲಕ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಸ್ವಾಗತಿಸಿದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ವಂದಿಸಿದರು. ಉಪನ್ಯಾಸಕರಾದ ಶೀನಪ್ಪ ನಾಯ್ಕ್ ಹಾಗೂ ಸುರೇಶ್ ನಿರೂಪಿಸಿದರು.
