ಬಂಟ್ವಾಳ: ಕಾಯಕವೇ ಕೈಲಾಸ ಎಂಬಂತೆ ದುಡಿದು ತಮ್ಮ ಜೀವನ ನಡೆಸುವ ವಿಶ್ವಕರ್ಮ ಸಮುದಾಯ ನಮ್ಮೆಲ್ಲರಿಗೂ ಮಾದರಿ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಹೇಳಿದರು.ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಟ್ಟಿನಿಂದ ಮರಣದವರೆಗೂ ಪ್ರತೀ ಹಂತದಲ್ಲೂ ವಿಶ್ವಕರ್ಮರ ಅಗತ್ಯವಿದೆ, ವಿಶ್ವಕರ್ಮರಿಲ್ಲದ ಜಗತ್ತನ್ನು ಊಹಿಸಲು ಅಸಾಧ್ಯ ಎಂದರು.ತಾಲೂಕುಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ವಿಶ್ವಕರ್ಮರು ರಾಜಕೀಯವಾಗಿಯೂ ಹೆಚ್ಚು ಶಕ್ತಿ ಶಾಲಿಗಳಾಗಬೇಕಿದೆ ಎಂದರು. ಪತ್ರಕರ್ತ ಮೌನೇಶ ವಿಶ್ವಕರ್ಮ ಪ್ರಾಸ್ತಾವಿಕ ವಾಗಿ ಮಾತನಾಡಿ, ವಿಶ್ವಕರ್ಮರ ವೈಶಿಷ್ಟ್ಯತೆಗಳ ಬಗ್ಗೆ ವಿವರಿಸಿದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯರು ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಮಾನ ದೊರೆತಿಲ್ಲ, ಈ ಬಗ್ಗೆ ಸಮುದಾಯ ಹೆಚ್ಚು ಚಿಂತನೆ ನಡೆಸಬೇಕಿದೆ ಎಂದರು. ಮಾಜಿ ಅಧ್ಯಕ್ಷ ಜಯಪ್ರಕಾಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಭಾರ ಉಪ ಉಪತಹಶೀಲ್ದಾರ್ ಸೀತಾರಾಮ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ,ತಾಲೂಕು ಕಚೇರಿ ಸಿಬ್ಬಂದಿ ಗಳು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ಈ ಸಂದರ್ಭ ವಾಸ್ತುಶಿಲ್ಪಿ ದೇವರಾಜ ಆಚಾರ್ಯರನ್ನು ಸನ್ಮಾನಿಸಲಾಯಿತು. ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ವಂದಿಸಿದರು.
