ಕೋಲಾರ : ಸಾಹಸಸಿಂಹ ವಿಷ್ಣುವರ್ಧನ್ ಅವರು ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎನ್ನುವಂತೆ ಹಲವಾರು ಸಮಾಜಮುಖಿ ಚಟುವಟಿಕೆಗಳ ಮೂಲಕ ಹೆಸರಾಗಿದ್ದವರು. ಅವರ ನೆನಪಿನಲ್ಲಿ ವಿಷ್ಣುಸೇನಾ ಸಮಿತಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆಯೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಕೆ. ರಾಘವೇಂದ್ರ ನುಡಿದರು. ಅವರು ನಗರದ ಹೊರವಲಯದ ಅಂತರಗಂಗಾ ಬುದ್ದಿಮಾಂದ್ಯ ಮಕ್ಕಳ ವಸತಿಶಾಲೆಯ ಚಿಣ್ಣರೊಂದಿಗೆ ವಿಷ್ಣುಸೇನಾ ಸಮಿತಿ ಹಮ್ಮಿಕೊಂಡಿದ್ದ ವಿಷ್ಣುವರ್ಧನ್ರ 69ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವಿಷ್ಣುವರ್ಧನ್ ಅಭಿಮಾನಿಗಳು ಕೆಂಗೇರಿಯಲ್ಲಿರುವ ವಿಷ್ಣುವರ್ಧನ್ ಸಮಾಧಿ ಮತ್ತು ಮೈಸೂರಿನ ಹೊರವಲಯದಲ್ಲಿ ಸರ್ಕಾರ ಹಾಗೂ ವಿಷ್ಣು ಕುಟುಂಬದವರು ಸೇರಿ ನಿರ್ಮಿಸುತ್ತಿರುವ ವಿಷ್ಣುವರ್ಧನ್ ಸ್ಮಾರಕಗಳನ್ನು ಎರಡು ಕಣ್ಣುಗಳ ರೀತಿಯಲ್ಲಿ ನೋಡಿಕೊಳ್ಳಬೇಕೆಂದು ಆಶಿಸಿದರು. ಸೇವಾ ಚಟುವಟಿಕೆಗಳ ಮೂಲಕ ವಿಷ್ಣುವರ್ಧನ್ ಅವರ ನೆನಪನ್ನು ಚಿರಸ್ಥಾಯಿಯಾಗಿಸುವ ಕಾರ್ಯವನ್ನು ವಿಷ್ಣುಸೇನಾ ಸಮಿತಿ ಮುಂದುವರೆಸಿಕೊಂಡು ಹೋಗಲಿದೆಯೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ತಿಳಿಸಿದರು.
ಬುದ್ದಿಮಾಂದ್ಯ ಮಕ್ಕಳಿಗೆ ಬೆಳಗಿನ ಉಪಹಾರ ಮತ್ತು ಬಿಸ್ಕತ್ ವಿತರಿಸಲಾಯಿತು. ವಿಷ್ಣು ಸೇನಾ ಸಮಿತಿಯ ಮಲ್ಲಿಕಾ ಪ್ರಕಾಶ್, ಕೆ. ಗಣೇಶ್, ಅರುಣಕುಮಾರ್, ಆನಂದಕುಮಾರ್ ನೆರ್ನಹಳ್ಳಿ, ನಾಗರಾಜ್, ಸಮಾಜ ಸೇವಕ ಮುನಿವೆಂಕಟ ಯಾದವ್, ಅಂತರಗಂಗಾ ಬುದ್ದಿಮಾಂದ್ಯ ಮಕ್ಕಳ ವಸತಿಶಾಲೆಯ ಪ್ರಜ್ಞಾ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

