ಕುಡುಪು : ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಷಷ್ಠಿ ಬ್ರಹ್ಮರಥದ `ಭೂಸ್ಪರ್ಶ’ ಪೂಜಾ ವಿಧಿವಿಧಾನ ಕಾರ್ಯಕ್ರಮ ನ. 18ರಂದು ಬೆಳಿಗ್ಗೆ ಕುಡುಪು ದೇವಸ್ಥಾನದ ಆಡಳಿತ ಮೊಕ್ತೇಸರ ಕೆ ನರಸಿಂಹ ತಂತ್ರಿಗಳ ಮುಂದಾಳತ್ವದಲ್ಲಿ ನಡೆಯಿತು.ಕುಡುಪು ದೇವಸ್ಥಾನದ ಎದುರಿರುವ ಶ್ರೀ ಜಾರಂದಾಯ ದೈವಸ್ಥಾನದ ಪಕ್ಕದಲ್ಲಿ ನೂತನ ರಥದ ಕೆತ್ತನೆ ಕೆಲಸ ನಡೆದಿದ್ದು, ಪೂಜೆ ನಡೆದ ಬಳಿಕ ಭೂಸ್ಪರ್ಶಗೊಂಡ ರಥವನ್ನು ಭಕ್ತರು ಒಂದಷ್ಟು ದೂರ ಎಳೆದು ಪುನೀತರಾದರು. ಡಿ. 2ರಂದು ಕುಡುಪು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಲಿರುವ ವಾರ್ಷಿಕ ಷಷ್ಠಿ ಜಾತ್ರೆಯಂದು ನೂತನ ರಥ ಎಳೆಯಲಾಗುತ್ತದೆ.
ಕಾರ್ಯಕ್ರಮದಲ್ಲಿ ತಂತ್ರಿಗಳ ಜೊತೆಯಲ್ಲಿ ರಥದ ಶಿಲ್ಪಿ ಗಣೇಶ್ ಆಚಾರ್ಯ ಹಿರಿಯಡ್ಕ ಹಾಗೂ ಅವರ ಬಳಗ, ಆನುವಂಶಿಕ ಮೊಕ್ತೇಸರ ಬಾಲಕೃಷ್ಣ ಕುಡುಪು, ಮೊಕ್ತೇಸರ ಭಾಸ್ಕರ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣರಾಜ ತಂತ್ರಿ, ಜೀರ್ಣೋದ್ಧಾರ ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಸುಜನ್‍ದಾಸ್ ಕುಡುಪು, ವಾಸುದೇವ ರಾವ್ ಮತ್ತು ರಾಘವೇಂದ್ರ ಭಟ್, ವಾಮಂಜೂರು ಅಮೃತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ರೈ, ಜೀರ್ಣೋದ್ಧಾರ ಸಮಿತಿ ಸದಸ್ಯ ಉಮೇಶ್ ಶೆಟ್ಟಿ, ಉದಯ ಕುಮಾರ್ ಕುಡುಪು ಮತ್ತಿತರರು ಉಪಸ್ಥಿತರಿದ್ದರು. ಬೆಳಿಗ್ಗೆ 9:36ಕ್ಕೆ ನೂತನ ಬ್ರಹ್ಮರಥ ಭೂಸ್ಪರ್ಶಗೊಂಡಿತು.
ರಥ ರಚನೆ/ವೈಶಿಷ್ಟ್ಯ:
ವಾರ್ಷಿಕ ಷಷ್ಠಿ ಜಾತ್ರೆಯಂದು ಶ್ರೀ ಅನಂತ ಪದ್ಮನಾಭ ದೇವರ ಮೂರ್ತಿಯನ್ನಿಟ್ಟು ಕುಡುಪು ರಥಬೀದಿಯಲ್ಲಿ ಎಳೆಯುವ ಬ್ರಹ್ಮರಥ ಇದಾಗಿದೆ. ಈ ವರ್ಷ ಮೇ ತಿಂಗಳಲ್ಲಿ ರಥದ ಕೆತ್ತನೆ ಕೆಲಸ ಆರಂಭಗೊಂಡಿದ್ದು, ನ. 18ರಂದು ರಥ ಬಿಟ್ಟುಕೊಡಲಾಗಿ ರಥದ ಭೂಸ್ಪರ್ಶ ಪೂಜೆ ನಡೆಯಿತು.
ರಥ ನಿರ್ಮಾಣ ಕೆಲಸದಲ್ಲಿ ಒಟ್ಟು 21 ಮಂದಿ ಸಕ್ರಿಯರಾಗಿದ್ದರು. ಸುದರ್ಶನ, ಸುದೀಪ್, ಮುರಳೀಧರ ಮೊದಲಾಗಿ ಏಳು ಕಲಾಕಾರರು ರಥದ ನಕ್ಷೆ ತಯಾರಿಯಲ್ಲಿ ನಿರತರಾಗಿದ್ದರು. ಶಂಕರಾಚಾರ್ಯರೊಂದಿಗೆ ವಜ್ರ, ಯೋಗೇಶ ಹಾಗೂ ಇತರರರು ಸಹ ಶಿಲ್ಪಿಗಳಾಗಿ ಕಾಷ್ಠಶಿಲ್ಪ ಕೆತ್ತನೆಯಲ್ಲಿ ತೊಡಗಿದ್ದರು. ನೂತನ ರಥ ನಿರ್ಮಾಣಕ್ಕೆ ಅಂದಾಜು 75 ಲಕ್ಷ ರೂ ಖರ್ಚಾಗಿದೆ.
ರಥದ ಅಕ್ಷ ಹದಿನಾಲ್ಕೂವರೆ ಅಡಿ ಎತ್ತರವಿದ್ದರೆ ಗಾಲಿಗಳು ಐದೂವರೆ ಅಡಿ ಎತ್ತರವಾಗಿವೆ. ಉತ್ತರಕ್ಕೆ ಜಂತಿಯ ಮೇಲೆ 11 ಇಂಚು ದಪ್ಪದ ಉಪಪೀಠವಿದ್ದು, ಇದರಲ್ಲಿ ಗಜ, ಸರ್ಪ, ಕೂರ್ಮ, ವೇದಮೂರ್ತಿ ಇತ್ಯಾದಿ ಪೀಠ ದೇವತೆಗಳಿವೆ. ಇದರ ಮೇಲೆ ಉಪಾಸ ಮತ್ತು ಕಂಪಗಳಿದ್ದು, ಇದರಲ್ಲಿ 12 ಇಂಚು ಎತ್ತರಕ್ಕೆ ಕಂಠವರ್ಗವಿದೆ. ಎಂಟು ದಿಕ್ಕಿಗೆ ಎಂಟು ಸಿಂಹ, 16 ಇತರ ವಿಗ್ರಹಗಳಿವೆ. ಮುಂದಿನ ಊಧ್ರ್ವಪದ್ಮ ಮತ್ತು ಕಪೋತಕ ಹಂತದ ಉತ್ತರ ಅಂಚಿನಲ್ಲಿ ಕೀರ್ತಿಮುಖವಿದ್ದು, ಮೇಲೆ 16 ಮೂಲೆ ಪಟ್ಟಿಕೆಗಳಿವೆ. ಮುಂದಿನ ಹಂತ ವೃತ್ತಾಕಾರವಾಗಿದೆ. ಇದರಲ್ಲಿ ಚಾರೆಗೂಟ, ಅರಳಿ ಎಲೆ ಸಾಲು, ಸರ್ಪಸಾಲು, ಹಗ್ಗ(ದರ್ಬೆ)-ಕುಶ ಸಾಲು ಇದೆ. ಮುಚ್ಚಿಗೆ ಮೇಲೆ 33 ಇಂಚು ಎತ್ತರದ ದೇವಾಸನ ಹಾಗೂ ದೇವಪೀಠ ನಿರ್ಮಿಸಲಾಗಿದೆ.
ಪುರಾಣ-ಶಾಸ್ತ್ರದ ಪ್ರಕಾರ ರಥದಲ್ಲಿ ಕಂಗೊಳಿಸಬೇಕಿರುವ ಎರಡು ಮಿಥುನ ಚಿತ್ರ ಕೆತ್ತಲಾಗಿದೆ. ಎಂಟು ದಿಕ್ಕಿನಲ್ಲಿ ಅಷ್ಟಕುಲ ನಾಗವಂಶದ ಪ್ರತಿಮಾ ಕಲ್ಪನಾ ಮೂರ್ತಿಗಳ ಕೆತ್ತಲಾಗಿದೆ. ಬ್ರಹ್ಮರಥಕ್ಕೆ ಬ್ರೇಕ್ ಹಾಗೂ ಸ್ಟಿಯರಿಂಗ್ ಅಳವಡಿಸಲಾಗಿದೆ. ಬೃಹತ್ ರಥವೊಂದರಲ್ಲಿ ಎರಡೂ ವ್ಯವಸ್ಥೆ ಇಲ್ಲೇ ಪ್ರಥಮ.