ಬಂಟ್ವಾಳ : ಮೌಲ್ಯ, ತತ್ತ್ವಗಳೊಂದಿಗೆ ಬದುಕಿ, ಅಕಾಡೆಮಿಕ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಹಿರಿಯ ಇತಿಹಾಸ ವಿದ್ವಾಂಸ, ಭಾಷಾ ತಜ್ಞ, ಲೇಖಕ ಪ್ರೋ. ಬಿ.ಸುರೇಂದ್ರ ರಾವ್ ಅವರಂತಹ ದೊಡ್ಡ ವಿದ್ವಾಂಸರನ್ನು ಕಳೆದು ಕೊಂಡಿರುವುದು ಸಮಾಜಕ್ಕೆ ಬಹು ದೊಡ್ಡ ನಷ್ಟ ಎಂದು ಹಿರಿಯ ಸಾಹಿತಿ ಪ್ರೋ| ಬಿ.ಎ. ವಿವೇಕ ರೈ ಹೇಳಿದರು.
ಇತ್ತೀಚೆಗೆ ನಿಧನ ಹೊಂದಿದ ಲೇಖಕ ಪ್ರೋ. ಬಿ. ಸುರೇಂದ್ರ ರಾವ್ಅ ವರಿಗೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕೊಡಿಯಾಲ್ಬೈಲ್ನಲ್ಲಿರುವ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಸೋಮವಾರ ಅಯೋಜಿಸಲಾದ ಗೌರವ ನಮನ, ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವುದೇ ಆಮಿಷ, ಹೊಗಳಿಕೆಗೆ ಒಳಗಾಗದೆ ಮೌಲ್ಯ, ತತ್ವಗಳ ಅಧಾರದಲ್ಲಿಯೇ ಅಕಾಡೆಮಿಕ್ ಕಾರ್ಯ ನಡೆಸಿದ ಸುರೇಂದ್ರ ರಾವ್ ವ್ಯಂಗ್ಯ, ವಿಡಂಬನೆಯ ಜತೆಗೆ ಪ್ರೀತಿಯ ಗಾಢತೆಯನ್ನು ಹೊಂದಿದವರು. ಛಲ, ಹಠದಿಂದ ಜೀವನ ನಿರ್ವಹಿಸಿದ ಅವರ ತಿಳುವಳಿಕೆ ಮಹೋನ್ನತವಾದದ್ದು ಎಂದರು.
ಪ್ರಮುಖರಾದ ಪ್ರೋ. ಕೆ. ಚಿನ್ನಪ್ಪಗೌಡ ಮಾತನಾಡಿ ಪ್ರೋ. ಬಿ. ಸುರೇಂದ್ರ ರಾವ್ ಅವರ ಮನೆಯಲ್ಲಿ 16,000 ಪುಸ್ತಕಗಳ ಮಹಾನ್ ಸಂಗ್ರಹವಿದ್ದು ಇದರಲ್ಲಿ ಅಪರೂಪದ ಹಲವು ಕೃತಿಗಳಿದ್ದವು. ನಿರಂತರ ಪುಸ್ತಕದ ಓದಿನ ಮುಖೇನ ಅವರು ಪಾಂಡಿತ್ಯ ಬೆಳಿಸಿದ್ದರು. ತುಳು ಶಬ್ದಕ್ಕೆ ಇಂಗ್ಲಿಷ್ನಲ್ಲಿ ಹಲವು ಅರ್ಥ ಸಿಗುವ ಅನುವಾದ ಮಾಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಚರಿತ್ರೆಯ ವಿವಿಧ ಆಯಾಮಗಳ ಅವರ ಬರಹಗಳು ಎಂದೆಂದಿಗೂ ಸ್ಮರಣೀಯ. ಯಕ್ಷಗಾನದ ಆಕರ ಗ್ರಂಥ ರಚಿಸಬೇಕು ಎಂಬ ಅವರ ಬಹುದಿನಗಳ ಕನಸು ಇಂದು ನನಸಾಗಿ ಉಳಿದಿದೆ ಎಂದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಪ್ರೋ. ಎಂ. ಬಿ. ಪುರಾಣಿಕ್, ಕ್ಯಾ. ಗಣೇಶ್ ಕಾರ್ಣಿಕ್, ಡಾ. ಎಂ. ಪ್ರಭಾಕರ ಜೋಶಿ, ಕಾನೂನು ವಿಶ್ವ ವಿದ್ಯಾನಿಲಯದ ಉಪಕುಲಪತಿ ಈಶ್ವರ್ ಭಟ್, ಪ್ರೋ. ಜಿ.ವಿ. ಜೋಶಿ, ಹರಿಕೃಷ್ಣ ಪುನರೂರು, ವಿನಾಯಕ ರೋಹನ್, ವಿಶಾಖ್, ಡಾ| ಸತ್ಯನಾರಾಯಣ ಮಲ್ಲಿಪಟ್ಟಣ, ನಂದಳಿಕೆ ಬಾಲಚಂದ್ರ ರಾವ್, ವಿಜಯಲಕ್ಷ್ಮೀ ಬಿ. ಶೆಟ್ಟಿ,
ಡಾ. ಉದಯ್ ಕುಮಾರ್ ಇರ್ವತ್ತೂರು, ಡಾ. ಎಂ. ಲೋಕೇಶ್, ಡಾ. ಲಕ್ಷ್ಮೀ ನಾರಾಯಣ ಭಟ್, ಡಾ| ಕಿಶೋರಿ ನಾಯಕ್, ಪ್ರೋ. ನರಸಿಂಹ ಮೂರ್ತಿ, ಕಲ್ಲೂರು ನಾಗೇಶ್, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.
