ಬಂಟ್ವಾಳ: ಲಾರಿಯೊಂದರಲ್ಲಿ ಅಕ್ರಮವಾಗಿ ಕಟ್ಟಿಗೆ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿರುವ ಬಂಟ್ವಾಳ ವಲಯ ಅರಣ್ಯ ಇಲಾಖೆ ಈ ಸಂಬಂಧ ಒರ್ವ ಆರೋಪಿಯನ್ನು ಬಂಧಿಸಿದ್ದು,ಇನ್ನೋರ್ವ ಪರಾರಿಯಾಗಿದ್ದಾನೆ. ಲಾರಿ ಚಾಲಕ ಅಕ್ಬರ್ ಭಾಷಾ ಮಾವಿನಕಟ್ಟೆ ಪರಾರಿಯಾಗಿದ್ದು, ಈತನ ಸಹೋದರ ಅಸಿಬ್ ಮಾವಿನಕಟ್ಟೆ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಪರಸ್ಪರ ಸಹೋದರರಾಗಿರುವ ಆರೋಪಿಗಳಿ ಜತೆಯಾಗಿ ಅಕ್ರಮವಾಗಿ ಮರಸಾಗಾಟ ದಂಧೆ ನಡೆಸುತ್ತಿದ್ದರೆಂದು ಆರೋಪಿಸಲಾಗಿದೆ.
ವಶಪಡಿಸಿಕೊಂಡ ಲಾರಿ ಸಹಿತ ಸೊತ್ತಿನ ಮೌಲ್ಯ ೨.೧೦ ಲಕ್ಷ ರೂ.ಎಂದು ಅಂದಾಜಿಸಲಾಗಿದೆ.ಬುಧವಾರ ರಾತ್ರಿ ಬಿ.ಸಿ.ರೋಡ್ ವೃತ್ತದ ಬಳಿ ಬಂಟ್ವಾಳ ವಲಯ ಅರಣ್ಯ ಇಲಾಖೆಯ ಸಿಬಂದಿಗಳು ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವೇಳೆ ಬೆಳ್ತಂಗಡಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಮಿನಿ ಲಾರಿಯನ್ನು ಅನುಮಾನದಿಂದ ತಡೆದು ನಿಲ್ಲಿಸಿದಾಗ ಚಾಲಕ ಲಾರಿಯನ್ನು ಅಲ್ಲೆ ನಿಲ್ಲಿಸಿ ಪರಾರಿಯಾಗಿದ್ದಾನೆ,ತಕ್ಷಣ ಲಾರಿಯಲ್ಲಿದ್ದ ಇನ್ನೊರ್ವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಅಕ್ರಮವಾಗಿ ಕಟ್ಟಿಗೆ ಸಾಗಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.ಕೂಡಲೇ ಈತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿಯವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಒ.ಸಿ.ಎಫ್- ಕರಿಕಾಲನ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್.- ಶಂಕರೇಗೌಡ ನಡೆಸಲಿದ್ದಾರೆ.