ಬಂಟ್ವಾಳ : ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಜೈನ ಧರ್ಮಕ್ಕೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜೈನ್ ಸ್ವಯಂಸೇವಾ ಟ್ರಸ್ಟ್ ಶ್ಲಾಘನೀಯ ಸೇವೆ ಮಾಡುತ್ತಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ರವಿವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಕಾರ್ಕಳ ಕರ್ನಾಟಕ ಜೈನ್ ಸ್ವಯಂಸೇವಾ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸ್ವಸಹಾಯ ಸಂಘದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಟ್ರಸ್ಟ್ ಸ್ವಸಹಾಯ ಸಂಘಗಳನ್ನು ಆರಂಭಿಸುವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ ಎಂದ ಅವರು,ಮಹಿಳೆಯರು ಸ್ವಾವಲಂಭಿ ಜೀವನ ನಡೆಸಿದಾಗ ಸಮಾಜಮುಖಿ ಕಾರ್ಯಗಳಲ್ಲೂ ಸಹಕಾರಿಯಾಗುತ್ತದೆ, ಸ್ವಸಹಾಯ ಸಂಘಗಳು ಅವರಿಗೆ ಸ್ವಾವಲಂಭಿ ಜೀವನ ನೀಡುತ್ತದೆ ಎಂದು ಹೇಳಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅತಿಥಿ ಸ್ಥಾನದಿಂದ ಮಾತನಾಡಿ ಜಿಲ್ಲೆಯ ಮಹಿಳಾ ಸಮುದಾಯಕ್ಕೆ ನವಚೈತನ್ಯ ನೀಡಲು ಜೈನ ಮುಖಂಡರ ನೇತೃತ್ವವೇ ಕಾರಣ. ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಡಾ. ರಾಜೇಂದ್ರಕುಮಾರ್ ಮಾದರಿ ಕಾರ್ಯ ನಡೆಸಿದ್ದಾರೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಈಗಾಗಲೇ ೧೮ ಜಿಲ್ಲೆಗಳಲ್ಲಿ ತನ್ನ ಕಾರ್ಯ ಕ್ಷೇತ್ರವನ್ನು ಹೊಂದಿರುವ ಜೈನ್ ಸ್ವಯಂಸೇವಾ ಟ್ರಸ್ಟ್ ಮುಂದೆ ರಾಜ್ಯದ ೧೦೦ ವಿಧಾನಸಭಾ ಕ್ಷೇತ್ರಗಳಲ್ಲಿ ವಿಸ್ತರಿಸಿ ೧೦೦ ಕೋ.ರೂ.ಗಳ ವ್ಯವಹಾರ ದಾಖಲಿಸುವಂತಾಗಲಿ ಎಂದು ಹಾರೈಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಹಿಂಸಾ ತತ್ವದ ಮೂಲಕ ಸಮಾಜದಲ್ಲಿ ಶಾಂತಿಯನ್ನು ಬಯಸುತ್ತಿರುವ ಜೈನ ಧರ್ಮವು ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡಿದೆ. ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷ ನೇಮಿರಾಜ ಆರಿಗ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಜಿನರಾಜ ಆರಿಗ ಪಚ್ಚಾಜೆಗುತ್ತು, ಟ್ರಸ್ಟಿನ ಬಂಟ್ವಾಳ ವಿ.ಕ್ಷೇತ್ರದ ಸಂಚಾಲಕ ವೃಷಭಕುಮಾರ ಇಂದ್ರ, ಸಲಹಾ ಸಮಿತಿ ಅಧ್ಯಕ್ಷೆ ಧನ್ಯಕುಮಾರಿ, ಮೇಲ್ವಿಚಾರಕ ಶಿವರಾಜ್ ಜೈನ್, ಟ್ರಸ್ಟಿ ಶಮಂತ್ ಕುಮಾರ್ ಜೈನ್, ಸುಭಾಶ್ಚಂದ್ರ ಜೈನ್, ವಿವಿಧ ವಿಧಾನಸಭಾ ಕ್ಷೇತ್ರಗಳ ಸಂಚಾಲಕರು ಉಪಸ್ಥಿತರಿದ್ದರು. ಬಂಟ್ವಾಳ ಕ್ಷೇತ್ರದ ಕಾರ್ಯದರ್ಶಿ ಸುಚಿಯಾ ಜೈನ್ ಸ್ವಾಗತಿಸಿದರು. ವಿಜಯಾ ಜೈನ್ ವಂದಿಸಿದರು. ರಿತಿಕಾ ಜೈನ್ ಕೊಯಕ್ಕುಡೆ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಸಂಘದ ಸದಸ್ಯರು ಮತ್ತು ಮಕ್ಕಳಿಗಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವೃಷಭಕುಮಾರ್ ಇಂದ್ರ ಅಜ್ಜಿಬೆಟ್ಟು, ಮಾಲಿನಿ ಆದಿರಾಜ ಜೈನ್ ಕೊಯಕ್ಕುಡೆ, ಶ್ವೇತಾ ಸಂತೋಷ್ ಜೈನ್ ವಗ್ಗ, ಸಂಧ್ಯಾನಯನ ಸಿದ್ಧಕಟ್ಟೆ ಮತ್ತು ಶಾಲಿನಿ ಜಿನೇಂದ್ರ ಜೈನ್ ಇವುಗಳನ್ನು ನಿರ್ವಹಿಸಿದರು.
