ಬಂಟ್ವಾಳ: ಕಾಲಿನ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಶನಿವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಧೈರ್ಯತುಂಬಿದರು.

ಕೊಲೆಯತ್ನ ಪ್ರಕರಣವೊಂದರಲ್ಲಿ ಆರೋಪಿಯೋರ್ವನನ್ನು ಬಂಧನಕ್ಕೆ ತೆರಳಿದ ಕಾನ್ಸ್ ಟೇಬಲ್ ಮಹೇಂದ್ರ ಅವರನ್ನು ಆರೋಪಿಯು ತಗ್ಗು ಪ್ರದೇಶಕ್ಕೆ ತಳ್ಳಿ ಹಾಕಿದ ಪರಿಣಾಮ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಗಂಭೀರಗಾಯಗೊಂಡು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವಿನಿಂದ ಘಟನೆಯ ವಿವರ ಪಡೆದುದಲ್ಲದೆ, ಆರೋಗ್ಯವನ್ನು ವಿಚಾರಿಸಿದರು. ಹಾಗೆಯೇ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ ವಿವರ ಪಡೆದು ಸೂಕ್ತ ಚಿಕಿತ್ಸೆ ನೀಡುವಂತೆಯು ಸಲಹೆ ನೀಡಿದರು.
ಕೊಲೆಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸಿದ್ದಕಟ್ಟೆ ಪರಿಸರದಲ್ಲಿ ಬಂಧಿಸಲು ಹೋದ ಕಾನ್ಸ್ ಟೇಬಲ್ ಮೇಲೆ ಹಲ್ಲೆಗೈದ ಆರೋಪಿ ನವಾಜ್ ಬಳಿಕ ಅವರನ್ನು ತಗ್ಗು ಪ್ರದೇಶಕ್ಕೆ ತಳ್ಳಿ ಹಾಕಿ ಪರಾರಿಗೆ ಯತ್ನಿಸಿದ್ದ.ಈ ಸಂದರ್ಭ ಇತರೆ ಇಬ್ಬರು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದರು. ಈ ಘಟನೆಯಿಂದ ಕಾನ್ಸ್ ಟೇಬಲ್ ಮಹೇಂದ್ರ ರವರ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಾಸಕರೊಂದಿಗೆ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕಗಷ ದೇವದಾಸ ಶೆಟ್ಟಿ ಮತ್ತಿತರರಿದ್ದರು.