ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಸಾಂಸ್ಕೃತಿಕ ಸಂಘ, ರೋವರ್ ರೇಂಜರ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಜಂಟಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾದ ಸಮಾರೋಪ ಸಮಾರಂಭ ಶನಿವಾರ ಜರಗಿತು.
ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಭಾರತ ದೇಶವು ಪ್ರಪಂಚಕ್ಕೆ ನೀಡಿದ ಅತ್ಯದ್ಭುತ ಕೊಡುಗೆಗಳಲ್ಲಿ ಸ್ವಾಮಿ ವಿವೇಕಾನಂದರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂತಹ ಕ್ಷಾತ್ರ ತೇಜ ಹೊಂದಿರುವ ವಿವೇಕಾನಂದರ ಆದರ್ಶಗಳನ್ನು ಹಾಗೂ ಬೋಧನೆಗಳನ್ನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಅನುಸರಿಸುವಂತಾಗಬೇಕು ಎಂದರು.
ಮಂಗಳೂರಿನ ನಿವೃತ್ತ ಸೇನಾಧಿಕಾರಿ ಗೋಪಿನಾಥ್ ರಾವ್ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ವಿವೇಕಾನಂದರು ಬೋಧಿಸಿದ ದೃಢ ನಿಶ್ಚಯ, ಏಕಾಗ್ರತೆ ಹಾಗೂ ಏಕತಾ ಭಾವನೆಯನ್ನು ಅನುಸರಿಸಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ ಮಾತನಾಡಿ, ಸ್ವಾಮಿ ವಿವೇಕಾನಂದರು ಜಗತ್ತಿಗೆ ಶಾಂತಿ ಹಾಗೂ ಮಾನವತೆಯ ಸಂದೇಶ ಸಾರಿದವರು. ಲೋಕಕಲ್ಯಾಣಕ್ಕಾಗಿ ಜಗದಗಲಕ್ಕೆ ಸಂಚರಿಸಿ ಸರ್ವರಲ್ಲಿಯೂ ಸೋದರತೆಯ ಭಾವನೆಯನ್ನು ಮೂಡಿಸಿದವರು. ಭವ್ಯ ಭಾರತದ ಯೋಗ, ಧ್ಯಾನ, ಆಧ್ಯಾತ್ಮ ಹಾಗೂ ವೇದಾಂತದ ಪರಂಪರೆಯನ್ನು ಪ್ರಪಂಚಕ್ಕೆ ತಿಳಿಸಿ ಭಾರತದ ಛಾಪನ್ನು ಮೂಡಿಸಿದ ದಿವ್ಯಾತ್ಮ ಎಂದರು.ರಾಷ್ಟ್ರೀಯಸೇವಾಯೋಜನೆಯ ಯೋಜನಾಧಿಕಾರಿ ದೇವಿಪ್ರಸಾದ್ , ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕಿ ನಸೀಮಾ ಬೇಗಂ ಎಸ್. ವಂದಿಸಿದದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.