ಪಾಟ್ನಾ: ಪಾಟ್ನಾದ ಗಾಂಧಿ ಮೈದಾನದಲ್ಲಿ ವಿಜಯದಶಮಿ ಹಬ್ಬದ ಅಂಗವಾದ ‘ದುಷ್ಟ ಸಂಹಾರ’ ಕಾರ್ಯಕ್ರಮದ ಆಚರಣೆಯ ವೇಳೆ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಟ 32 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಸಾವಿನ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಗಾಯಗೊಂಡವರನ್ನು ಪಾಟ್ನಾದ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.
ಕಾರ್ಯಕ್ರಮದ ವೇಳೆ ವಿದ್ಯುತ್ ಕಂಬದ ತಂತಿ ಕೆಳಗೆ ಬೀಳುತ್ತಿದೆ ಎನ್ನುವ ಸುಳ್ಳು ವದಂತಿಯಿಂದ ಈ ದುರಂತ ನಡೆದಿದ್ದು, ಈ ರೀತಿ ವದಂತಿ ಹರಡಿದವರ ಬೇಟೆಗೆ ಪಾಟ್ನಾ ಪೊಲೀಸರು ಸಿದ್ಧರಾಗಿದ್ದಾರೆ. ವದಂತಿ ಹರಡಿದವರ ಈಗಾಗಲೇ ಕೆಲವೊಂದು ಸುಳಿವುಗಳು ಪೊಲೀಸರಿಗೆ ಲಭಿಸಿದ್ದು, ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದು ಕುಟುಂಬಿಕರ ರೋಧನ ಮುಗಿಲುಮುಟ್ಟುತ್ತಿದೆ. ಸಾಕಷ್ಟು ಮುಂಜಾಗೃತೆ ಕ್ರಮ ವಹಿಸದಿರುವುದೇ ಘಟನೆಗೆ ಕಾರಣವೆಂದು ಆರೋಪಿಸಲಾಗುತ್ತಿದೆ.





