ಬಂಟ್ವಾಳ: ನ್ಯಾಯಲಯದ ಆದೇಶದಂತೆ ಬಂಟ್ವಾಳ ಪುರಸಭೆಯ ಕಸವನ್ನು ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿಯೇ ವಿಲೇವಾರಿ ಮಾಡಬೇಕು, ಈ ಸಂಬಂಧ ಒಣ ಕಸ ಸಾಗಟಕ್ಕೆ ಅಡ್ಡಿಪಡಿಸಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಮಂಗಳೂರು ಸಹಾಯಕ ಆಯುಕ್ತರು ನೀಡಿದ ಆದೇಶಕ್ಕೂ ಬೆಲೆ ನೀಡದೆ ಕಂಚಿನಡ್ಕ ಪದವಿನಲ್ಲಿ ಸ್ಥಳೀಯರು ಸೋಮವಾರ ಪ್ರತಿಭಟನೆಗೆ ಸಿದ್ದತೆ ನಡೆಸಿದ್ದರು. ಪುರಸಭೆಯ ಕಸದ ವಾಹನವನ್ನು ತಡೆಯಲು ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಕಾದು ಕುಳಿತಿದ್ದು ಅದು ಬಾರದೇ ಇದ್ದಾಗ ನಿರಾಸೆಯಿಂದ ಹಿಂದಿರುಗಬೇಕಾಯಿತು.

BTW_MAR16_1ಶನಿವಾರ ಪುರಸಭೆಯಲ್ಲಿ ಕರೆದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ಸಭೆಯಲ್ಲಿ ಸುದೀರ್ಘ ಕಾಲ ಚರ್ಚೆ ನಡೆಸಿ ಅಂತಿಮವಾಗಿ ಕಂಚಿನಡ್ಕ ಪದವಿನಲ್ಲಿ ಮಾ.15 ರಿಂದಲೇ ಒಣಕಸ ವಿಲೇವಾರಿ ಮಾಡಬೇಕು, ಅಡ್ಡಿಪಡಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದ ಸಹಾಯಕ ಆಯುಕ್ತರು ಬಾಕಿ ಉಳಿದಿರುವ ಕೆಲಸವನ್ನು ಆರಂಭಿಸಬೇಕು, ಸ್ಥಳೀಯರ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈಡೇರಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದರು. ಅದರೂ ಸೋಮವಾರ ಕಸದ ಲಾರಿ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಬರಲಿದೆ ಎಂದು ಮನಗಂಡ ಸ್ಥಳೀಯ ಪಂಚಾಯಿತಿ ಅಧ್ಯಕ್ಷ ಮತ್ತಿತರರು ಸ್ಥಳೀಯ ಪ್ರಮುಖರು ಮಹಿಳೆಯರನ್ನು ಹಾಗೂ ಮಕ್ಕಳನ್ನು ಸಂಘಟಿಸಿ ತ್ಯಾಜ್ಯ ಸಂಸ್ಕರಣ ಘಟಕದ ಬಾಗಿಲು ಬಳಿ ಪ್ರತಿಭಟನೆಗೆ ಸಜ್ಜಾಗಿ ಕಸದ ಲಾರಿಯನ್ನು ಕಾದು ನಿಂತಿದ್ದರು. ಆದರೆ ಕಾರಣಾಂತಗಳಿಂದ ಕಸದ ಲಾರಿ ಬಾರದೇ ಇದ್ದದರಿಂದ ಬಿಸಿಲಿನಲ್ಲಿ ಕಾದ ಪ್ರತಿಭಟನಕಾರರು ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ವಾಪಸ್ಸಾಗಬೇಕಾಯಿತು. ಸಂಸ್ಕರಣ ಘಟಕದ ಸುತ್ತಮುತ್ತಲಿರುವ 150ಕ್ಕಿಂತಲೂ ಅಧಿಕ ಕುಟುಂಬಗಳಿಗೆ ಪ್ರತ್ಯೇಕ ಸ್ಥಳದಲ್ಲಿ ಮನೆ ನಿರ್ಮಿಸಿ ಕೊಡಬೇಕು, ಅಂಗನವಾಡಿ, ಮಸೀದಿಗಳಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಆ ಬಳಿಕವೇ ತ್ಯಾಜ್ಯ ಸಂಸ್ಕರಣ ಕಾಮಗಾರಿ ಆರಂಭಿಬೇಕು ಎನ್ನುವುದು ಪ್ರತಿಭಟನಕಾರರ ವಾದವಾಗಿದೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಡಂಪಿಂಗ್ ಯಾರ್ಡ್ ಅಲ್ಲ ಸಂಸ್ಕರಣ ಘಟಕ
ಕಂಚಿನಡ್ಕ ಪದವಿನಲ್ಲಿ ನಿರ್ಮಾಣಗೊಳ್ಳುತ್ತಿರುವುದ ಕಸದ ಡಂಪಿಂಗ್ ಯಾರ್ಡ್ ಅಲ್ಲ ಬದಲಾಗಿ ಸಂಸ್ಕರಣ ಘಟಕ. ಇಲ್ಲಿ ಒಣ ಕಸವನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದೆ. ಹಸಿಕಸವನ್ನು ಪುರಸಭೆಯ ಹಿಂಭಾಗದಲ್ಲಿಯೇ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಅದರ ಪಕ್ಕದಲ್ಲಿ ಬಂಟ್ವಾಳದ ಅಂಗನವಾಡಿ ಕೇಂದ್ರ, ಪುರಸಭೆ ಕಚೇರಿ ಇದ್ದರೂ ಕೂಡ ಯಾವುದೇ ದುರ್ವಾಸನೆ ಇಲ್ಲದೆ ವ್ಯವಸ್ಥಿತವಾಗಿ ವಿಲೇವಾರಿಯಾಗುತ್ತಿದೆ. ಆದರೆ ಕಂಚಿನಡ್ಕ ಪದವಿನಲ್ಲಿ ಒಣ ಕಸವನ್ನು ಮಾತ್ರ ವಿಲೇವಾರಿ ಮಾಡಲು ತೀರ್ಮಾನಿಸಿದ್ದರೂ ಸ್ಥಳೀಯರು ಯಾಕೆ ವಿರೋಧಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ, ವಾಸ್ತವಾಂಶವನ್ನು ತಿಳಿಸಿ ಜನರನ್ನು ಮನವರಿಕೆ ಮಾಡಬೇಕಾದ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಜನರಿಗೆ ತಪ್ಪು ಮಾಹಿತಿ ನೀಡಿ ಪ್ರತಿಭಟನೆಗೆ ಪ್ರೇರೆಪಿಸುತ್ತಿದ್ದಾರೆ ಎನ್ನುವ ದೂರುಗಳು ಪ್ರಜ್ಞಾವಂತರಿಂದ ಕೇಳಿ ಬಂದಿದೆ. ಕಳೆದ ಹಲವು ವರ್ಷಗಳಿಂದ ಕಂಚಿನಡ್ಕ ತ್ಯಾಜ್ಯ ಸಂಸ್ಕರಣ ಘಟಕದ ವಿವಾದ ನಡೆಯುತ್ತಿದ್ದು ಪುರಸಭೆ ಹಾಗೂ ಸಜೀಪನಡು ಪಂಚಾಯಿತಿ ನಡುವೆ ಮುಸಕಿನ ಗುದ್ದಾಟಕ್ಕೆ ವೇದಿಕೆ ಮಾಡುವ ಬದಲು ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿಕೊಡಬೇಕೆನ್ನುವ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *