ಕೆಜಿಎಪ್ :ಕೊರೋನಾ ವೈರಸ್ ಹರುಡುವಿಕೆಯನ್ನು ತಡೆಯಲು ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅತ್ಯವಶ್ಯಕ ದಿನಸಿ ಅಂಗಡಿಗಳ ಬಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಕರೆ ನೀಡಿದರು. 
ರಾಷ್ಟ್ರದಾದ್ಯಂತ ಲಾಕ್ಡೌನ್ ನಿಷೇಧಾಜ್ಞೆಯು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೆಜಿಎಫ್ ನಗರದ ರಾಬರ್ಟ್ಸನ್ಪೇಟೆಯ ಗಾಂಧಿವೃತ್ತ, ಎಂ.ಜಿ.ಮಾರುಕಟ್ಟೆ, ಗೀತಾರಸ್ತೆ, ಸೂರಜ್ಮುಲ್ ವೃತ್ತ ಮೊದಲಾದೆಡೆಗಳಲ್ಲಿ ಎಸ್ಪಿ ಮೊಹಮ್ಮದ್ ಸುಜೀತ ಅವರು ಗಸ್ತು ಮಾಡಿ, ಅತ್ಯವಶ್ಯಕ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ, ಜನಸಾಮಾನ್ಯರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು, ಪ್ರತಿಯೊಬ್ಬರು ಮಾಸ್ಕ್ ಧರಿಸಿ ಓಡಾಡಲು, ಅಂಗಡಿಗಳವರು ಸ್ಯಾನಿಟೈಜರ್, ಸಾಬೂನು, ಕೈತೊಳೆಯುವ ನೀರಿನ ವ್ಯವಸ್ಥೆ ಮಾಡಿಡಲು ಸೂಚಿಸಿದರು. 
ಜಿಲ್ಲಾ ರಕ್ಷಣಾಧಿಕಾರಿಗಳ ಭೇಟಿಯ ಸಮಯದಲ್ಲಿ ಪೌರಾಯುಕ್ತ ರಾಜು, ಡಿವೈಎಸ್ಪಿ ಬಿ.ಕೆ.ಉಮೇಶ್, ಸರ್ಕಲ್ ಇನ್ಸ್ಪೆಕ್ಟರ್ ಸೂರ್ಯಪ್ರಕಾಶ್, ಪಿಎಸ್ಐ ಆನಂದಬಾಬು ಅವರುಗಳಿದ್ದರು. ದಿನಸಿ ಅಂಗಡಿಗಳಲ್ಲಿ ಸ್ವಚ್ಚತೆ, ಶುಭ್ರತೆಯನ್ನು ಕಾಪಾಡಲು, ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಕೈತೊಳೆದುಕೊಂಡು ದಾಸ್ತಾನು ನೀಡಲು, ಸಾರ್ವಜನಿಕರು ಸಹ ಮಾಸ್ಕ್ ಧರಿಸದೇ ಓಡಾಡದೇ ರಕ್ಷಣಾ ವಿಧಿ ವಿಧಾನಗಳನ್ನು ಪಾಲಿಸುವಂತೆ ಕೋರಿದ್ದಾರೆ.
ಕೊರೋನಾ ವೈರಸ್ ಕುರಿತಾದ ದೂರುಗಳಿದ್ದಲ್ಲಿ ಸಹಾಯವಾಣಿ ದೂರವಾಣಿ ಸಂಖ್ಯೆ: 104, 1077 ಅಥವಾ ಪೊಲೀಸ್ ಕಂಟ್ರೋಲ್ ರೂಂ 08153274743ಗೆ ಅಥವಾ ಮೊಬೈಲ್ ನಂ: 9480802700 ಅನ್ನು ಸಂಪರ್ಕಿಸಲು ಜಿಲ್ಲಾ ರಕ್ಷಣಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಕೋರಿದ್ದಾರೆ.