ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಷನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿ ಕಾಂಗ್ರೆಸ್’ ಕೈ’ಯಿಂದ ಜಾರಿ ಬಿಜೆಪಿ ತೆಕ್ಕೆಗೆ ಬಂದಿದೆ.ಮುಂದಿನ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನೇಮಿರಾಜ ರೈ ಬೋಳಂತೂರು,ಉಪಾಧ್ಯಕ್ಷರಾಗಿ ವಿಠಲ ಸಾಲ್ಯಾನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ .ಅವರು ಗುರುವಾರ ಎಪಿಎಂಸಿ ಕಚೇರಿಯಲ್ಲಿ ನೂತನ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ಎಪಿಎಂಸಿ ಕಾರ್ಯದರ್ಶಿ ಶಮಂತ್ ಕುಮಾರ್ ಸಹಕರಿಸಿದರು. ಕಳೆದ 40 ತಿಂಗಳು ಕಾಂಗ್ರೆಸ್ ಆಡಳಿತದಲ್ಲಿದ್ದ ಬಂಟ್ವಾಳ ಎಪಿಎಂಸಿಯ ಕೊನೆಯ 20 ತಿಂಗಳ ಅವಧಿ ಬಿಜೆಪಿಗೆಒಲಿದಿದೆ.
ಇಲ್ಲಿ ಬಿಜೆಪಿ 7 ಸದಸ್ಯ ಬಲ ಹೊಂದಿದ್ದರೆ,ಕಾಂಗ್ರೆಸ್ 6 ಸದಸ್ಯ ಬಲ ಹೊಂದಿದೆ. ಕಳೆದ 40 ತಿಂಗಳು ಮೂವರು ನಾಮನಿರ್ದೇಶಿತ ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ನ ಪದ್ಮನಾಭರೈ ಅಧ್ಯಕ್ಷರಾಗಿ ಚಂದ್ರಶೇಖರ ಪೂಜಾರಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಇದೀಗ ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಮೂವರು ನಾಮನಿರ್ದೇಶಿತ ಸದಸ್ಯರು ಆಯ್ಕೆಯಾಗಿದ್ದು, ಪರಿಣಾಮ ಬಿಜೆಪಿ ಮರಳಿ ಅಧಿಕಾರದ ಗದ್ದುಗೆಗೇರಿದೆ. 
ನಾಮನಿರ್ದೇಶಿತ ಸದಸ್ಯರ್ಯಾರು:
ತನಿಯಪ್ಪ ಗೌಡ ಮಾಣಿ,ವಸಂತ ಅಣ್ಣಳಿಕೆ ಹಾಗೂ ರೇಣುಕಾ ವಿಜಯ ರೈ ಅವರು ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆ ಬಂಟ್ವಾಳ,ಉಪಾಧ್ಯಕ್ಷತೆ ಮಂಗಳೂರಿಗೆ:
ಎಪಿಎಂಸಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ನೇಮಿರಾಜ ರೈ ಅವರು ಬಂಟ್ವಾಳ ಕ್ಷೇತ್ರದ ಬೋಳಂತೂರಿನವರಾಗಿದ್ದು,ಈ ಹಿಂದೆ2013-14 ರಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವನ್ನು ಹೊಂದಿದ್ದು,ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಹಾಗೆಯೇ ಉಪಾಧ್ಯಕ್ಷ ಸ್ಥಾನ ಬಂಟ್ವಾಳ ತಾ.ನ ಮಂಗಳೂರು ವಿಧಾನ ಕ್ಷೇತ್ರಕ್ಕೊಳಪಟ್ಟ ತುಂಬೆ ವಾಡ್೯ ನ ವಿಠಲ ಸಾಲಿಯಾನ್ ಗೆ ಒಲಿದಿದ್ದು,ಇವರು ಇದೇ ಮೊದಲಿಗೆ ಎಪಿಎಂಸಿಗೆ ಚುನಾಯಿತರಾದವರಾಗಿದ್ದಾರೆ.
ಅಭಿನಂದನೆ
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಮಂಗಳೂರು ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್,ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ,ಪುರಸಭಾ ಸದಸ್ಯ ಗೋವಿಂದ ಪ್ರಭು,ತಾಪಂ ಸದಸ್ಯರಾದ ನವೀನ್ ಪೂಜಾರಿ,ಪಾದಲ್ಪಾಡಿ ,ಗಣೇಶ್ ಸುವರ್ಣ ಮುಖಂಡರಾದ ದಿನೇಶ್ ಅಮ್ಟೂರು,ವಿಜಯ ರೈ,ರಮಾನಾಥ ರಾಯಿ,ಪುರುಷೋತ್ತಮ ಶೆಟ್ಟಿ ವಾಮದಪದವು, ಪುರುಷೋತ್ತಮ ಪೂಜಾರಿ ಮಜಲು,ರವೀಶ್ ಶೆಟ್ಟಿ ವಿಟ್ಲ, ಸಂತೋಷ್ ಕುಮಾರ್ ರೈ ಬೋಳಿಯಾರ್,ಆನಂದ ಎ.ಶಂಭೂರು,ಮನೋಜ್ ನಾಣ್ಯ,ಚಂದ್ರಶೇಖರ ಉಚ್ಚಿಲ್,ಜಯಶ್ರೀ ಕರ್ಕೇರ,ಯಶವಂತ ಅಮೀನ್,ದಿನೇಶ್ ಶೆಟ್ಟಿ ಕೊಟ್ಟಿಂಜ,ಸುಬ್ರಹ್ಮಣ್ಯ ಭಟ್,ಸಂಜೀವ ಶೆಟ್ಟಿ ಅಂಬ್ಲಮೊಗರು ಮೊದಲಾದವರು ಅಭಿನಂದಿಸಿದರು.
ಶೀಘ್ರ ಎಪಿಎಂಸಿ ಯಾಡ್೯ :
ಈ ಸಂದರ್ಭದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಎಪಿಎಂಸಿ ನೂತನ ಅಧ್ಯಕ್ಷ ನೇಮಿರಾಜ ರೈ ಅವರು, ಹಲವು ಕಾರಣಗಳಿಂದ ಎಪಿಎಂಸಿ ಯಾರ್ಡ್ ನಿರ್ಮಾಣದ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಮೆಲ್ಕಾರ್‌ನಲ್ಲಿ ಮೀಸಲಿರಿಸಲಾದ ೭ ಎಕರೆ ಜಾಗದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಈ ಬಾರಿ ಎಪಿಎಂಸಿ ಯಾರ್ಡ್ ನಿರ್ಮಾಣ ನಮ್ಮ ಪ್ರಮುಖ ಗುರಿಯಾಗಿದೆ. ಯಾರ್ಡ್ ಮೂಲಕ ರೈತರಿಗೆ ಅನುಕೂವಾಗುವ ಕೆಲಸ ಮಾಡುವ ಜತೆಗೆ ಚೀಟಿ ವ್ಯವಹಾರ ಸೇರಿದಂತೆ ರೈತರಿಗೆ ಆಗುವ ತೊಂದರೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದರು. ಉಪಾಧ್ಯಕ್ಷ ವಿಠಲ ಸಾಲಿಯಾನ್ ಉಪಸ್ಥಿತರಿದ್ದರು.