ಹೈದರಾಬಾದ್ : ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಬುಧವಾರ ಘಟಿಸಲಿದೆ. ‘ಚಂದ್ರಗ್ರಹಣವು ಮಧ್ಯಾಹ್ನ 1.43ಕ್ಕೆ ಆರಂಭವಾಗಿ, ಸಂಜೆ 7.05ಕ್ಕೆ ಕೊನೆಗೊಳ್ಳಲಿದೆ. ಮಧ್ಯಾಹ್ನ 3.54ಕ್ಕೆ ಪೂರ್ಣಪ್ರಮಾಣದ ಗ್ರಹಣ ಸಂಭವಿಸುತ್ತದೆ.

4.24 ಮತ್ತು 4.54ರ ನಡುವೆ ಗ್ರಹಣದ ಹೆಚ್ಚಿನ ಭಾಗ ಕಾಣಿಸಲಿದೆ’ ಎಂದು ಮುಂಬೈನ ನೆಹರು ತಾರಾಲಯದ ನಿರ್ದೇಶಕ ಅರವಿಂದ್ ಪರಾಂಜಪೆ ಹೇಳಿದ್ದಾರೆ. ಆದರೆ, ಗ್ರಹಣದ ಬಹುತೇಕ ಅವಧಿಯಲ್ಲಿ ಚಂದ್ರ ಭೂಮಧ್ಯ ರೇಖೆಗಿಂತ ಕೆಳಗಿರುವುದರಿಂದ ಭಾರತದಲ್ಲಿ ಗ್ರಹಣದ ಅಂತಿಮ ಭಾಗವಷ್ಟೆ ಗೋಚರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪೂರ್ಣ ಚಂದ್ರ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣ ಉಂಟಾಗುತ್ತದೆ. ವರ್ಷದ ಮೊದಲನೇ ಚಂದ್ರಗಹಣ ಏಪ್ರಿಲ್ 15ರಂದು ನಡೆದಿತ್ತು.