ಉಡುಪಿ :ಅಜ್ಜರಕಾಡು ಉದ್ಯಾನವನದಲ್ಲಿ ಮತ್ತು ಸಮೀಪದ ಯುದ್ಧ ಸ್ಮಾರಕದ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದ ಒಂದು ವರ್ಷದಿಂದ ಉಡುಪಿಯ ಸ್ವಚ್ಛ ಭಾರತ್ ಫ್ರೆಂಡ್ಸ್, ಕ್ಲೀನ್ ಉಡುಪಿ ಪ್ರಾಜೆಕ್ಟ್ ಮತ್ತು ಜೇಸಿಐ ಉಡುಪಿ ಸಿಟಿ ವತಿಯಿಂದ ಸ್ವಚ್ಛತಾ ಅಭಿಯಾನ ಹಾಗೂ ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ವಿವಿಧ ದಿನಾಚರಣೆಗಳ ಸಮಯ ಕರಪತ್ರದ ಮೂಲಕ ಇಲ್ಲಿಯ ಜನರಿಗೆ ಅರಿವು ಮೂಡಿಸುತ್ತಿರವ ಉಭಯ ಸಂಘಟನೆಗಳು ಪ್ರತಿ ವರ್ಷವೂ ಕಾರ್ಗಿಲ್ ವಿಜಯ್ ದಿವಸ್ ಮಾಜಿ ಸೈನಿಕರ ಜೊತೆಗೆ ಸೇರಿಕೊಂಡು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯಕ್ರಮ ನಡೆಸುತ್ತಿದ್ದಾರೆ. ನೂತನ ಕಾಂಕ್ರೀಟ್ ಬೆಂಚುಗಳನ್ನು ಈಗಾಗಲೇ ಸೈನಿಕ ಸ್ಮಾರಕದ ಎದುರು ದಾನಿಗಳ ಸಹಕಾರದಿಂದ ಅಳವಡಿಸಲಾಗಿದೆ.

ಆದರೆ ಈ ಪರಿಸರದಲ್ಲಿ ಮದ್ಯವ್ಯಸನಿಗಳ ಹಾವಳಿ ಮಿತಿ ಮೀರುತ್ತಿದೆ. ಸಾವಿರಾರು ರೂಪಾಯಿ ವ್ಯಯಿಸಿ ಕುಡಿದು ಇಲ್ಲಿಯ ಪರಿಸರದಲ್ಲಿ ಮನಸ್ಸಿಗೆ ಬಂದ ಹಾಗೆ ಬಾಟಲ್ ಗಳನ್ನು ಬಿಸಾಡುತ್ತಾರೆ. ಇಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದರಿಂದ ಸಮಾಜಘಾತಕ ಶಕ್ತಿಗಳು ಈ ಪರಿಸರದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ.
ಅಜ್ಜರಕಾಡಿನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಅಳವಡಿಸಬೇಕು ಮತ್ತು ಪೊಲೀಸ್ ಬೀಟ್ ವ್ಯವಸ್ಥೆ ಮಾಡಬೇಕು ಎಂಬ ಮನವಿಯನ್ನು ಇಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ, ಜಿಲ್ಲಾಧಿಕಾರಿಯವರಿಗೆ ಮತ್ತು ಉಡುಪಿ ನಗರಸಭೆಯ ಪೌರಾಯುಕ್ತರಿಗೆ ಸ್ವಚ್ಛ ಭಾರತ ಫ್ರೆಂಡ್ಸ್ ಸಂಘಟನೆಯ ಸದಸ್ಯರು ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದಾಗ ಮಾನ್ಯ ಅಪರ ಜಿಲ್ಲಾಧಿಕಾರಿಗಳು ತಕ್ಷಣ ಸಂಬಂಧಪಟ್ಟ ಅಧಿಕಾರಿಯವರಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ವಿವರಿಸಿದರು. ಪೊಲೀಸ್ ಬೀಟ್ ವ್ಯವಸ್ಥೆ ಮಾಡಲು ಪ್ರಯತ್ನಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ.ನಾಯಕ್, ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಸಂಘಟನೆಯ ಗ್ರಾಮೀಣಾಭಿವೃದ್ಧಿ ಯೋಜನೆ ಸಂಯೋಜಕ ಜಗದೀಶ್ ಶೆಟ್ಟಿ, ಉಡುಪಿ ತಾಲೂಕು ಸಂಯೋಜಕ ಉದಯ ನಾಯ್ಕ್, ಮಾಜಿ ಸೈನಿಕರಾದ ವಾದಿರಾಜ್ ಹೆಗ್ಡೆ, ವೀಕ್ಷಿತ್, ನೆಹಲ್ ಕುಂದರ್ ಉಪಸ್ಥಿತರಿದ್ದರು.