ಬಂಟ್ವಾಳ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳವಾರವು ಬಂಟ್ವಾಳದಲ್ಲಿ ಬೆಳಗ್ಗಿನ ಹೊತ್ತು ಚಟುವಟಿಕೆಯಿಂದ ಕೂಡಿತ್ತು. ಜನಸಂಚಾರ,ವಾಹನ ಸಂಚಾರವು ಕಂಡುಬಂದರೂ, ಮಧ್ಯಾಹ್ನದ ಬಳಿಕ ಪೇಟೆ ಪ್ರದೇಶಗಳು ಬಿಕೋ ಎನ್ನುತ್ತಿತ್ತು.
ಬಿ.ಸಿ.ರೋಡು ಹಾಗೂ ಬಂಟ್ವಾಳ ಪೇಟೆಯಲ್ಲಿ ೧೧ ಗಂಟೆಯ ವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದು, ಜನರು ಸ್ವಂತ ವಾಹನಗಳ ಮೂಲಕ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು. 11 ಗಂಟೆಯವರೆಗೆ ಆಟೋರಿಕ್ಷಾಗಳು ಬಾಡಿಗೆ ನಡೆಸಿದವು.ಬಂದ್ ಸಮಯದ ಬಳಿಕವು ಔಷಧಿ ಸಹಿತ ಅಂಗಡಿ ಮುಂಗಟ್ಟು ಮುಚ್ಚಿದರೂ,ಖಾಸಗಿ ವಾಹನಗಳು,ದ್ವಿಚಕ ಮಾ ವಾಹನಗಳು ಮಾತ್ರ ಯಾರ ಭಯವು ಇಲ್ಲದೆ ನಿರಾಂತಕವಾಗಿ ಓಡಾಡುತ್ತಿದ್ದವು.
ಪೊಲೀಸರಿಂದ ಎಚ್ಚರಿಕೆ:
ಕಳೆದ ಗುರುವಾರ ಲಾಕ್ ಡೌನ್ ಆರಂಭವಾದಂದಿನಿಂದ ತೆರೆದು ಅಂಗಡಿಗಳು 11 ಗಂಟೆಯಾಗುತ್ತಿದ್ದಂತೆ ಮುಚ್ಚುತ್ತಿದ್ದವು,ಮಂಗಳವಾರ ಮಾತ್ರ ಬಂಟ್ವಾಳ ಪೇಟೆಯಲ್ಲಿ ಕೆಲವೊಂದು ಅಂಗಡಿಗಳು ಬಂದ್ ಸಮಯದ ನಂತರವು ಒಂದಷ್ಟು ಹೊತ್ತು ತೆರೆದಿದ್ದು,ಗಸ್ತು ಪೊಲೀಸ್ ವಾಹನದ ಸಿಬ್ಬಂದಿಗಳು ತೆರೆದಿದ್ದ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿ ಮುಚ್ಚಿಸಿದರು.
ಬಿಜೆಪಿಯಿಂದ ಜಾಗೃತಿ ಸಂದೇಶ:
ಈ ನಡುವೆ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಕೊರೋನ ಮಹಾಮಾರಿಯ ವಿರುದ್ದ ಹೋರಾಡುವ ನಿಟ್ಟಿನಲ್ಲಿ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಸಂದೇಶವನ್ನು ಸಾರಲಾಯಿತು.