ಬಂಟ್ವಾಳ: ನಕಲಿ ಪೊಲೀಸ್ ಅಧಿಕಾರಿಯ ವೇಷದಲ್ಲಿ ಬಂದು ವೃದ್ದರೋರ್ವರಿಂದ ನಗದು ಮತ್ತು ಚಿನ್ನದ ಉಂಗುರ ದೋಚಿದ ಪ್ರಕರಣ ಆರೋಪಿಗಳನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಅಸಲಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರ ರಾಜ್ಯದ ಆಹ್ಮದ್ ನಗರ ಜಿಲ್ಲೆಯ ಶ್ರೀರಾಂಪುರ ನಿವಾಸಿಗಳಾದ ಜಾಕೀರ್ ಹುಸೇನ್ (26) ಹಾಗೂ ಕಂಬರ್ ರಹೀಂ ಮಿರ್ಜಾ(32) ಬಂಧಿತ ಆರೋಪಿಗಳಾಗಿದ್ದಾರೆ.

Untitled-1

2020 ರ ಜನವರಿ 18 ರಂದು ಮಧ್ಯಾಹ್ನ ಬಿ.ಸಿ.ರೋಡಿಗೆ ಸಮೀಪದ ಕೈಕಂಬ ಬಳಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಕೊಡಂಗೆ ಮಿತ್ತಬೈಲ್ ನಿವಾಸಿ ಶಿವರಾಮ್ ಪ್ರಸಾದ್ ಶರ್ಮ ಅವರನ್ನು ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಹತ್ತಿರಕ್ಕೆ ಕರೆದು ನಾನು ಕ್ರೈಂ ಬ್ರಾಂಚ್ ನ ಪೊಲೀಸ್ ಅಧಿಕಾರಿ ಆಶೋಕ್ ಕುಮಾರ್ ಎಂದು ಪರಿಚಯಿಸಿ ನಿನ್ನೆ ಇಲ್ಲಿ ಏನಾದರೂ ಘಟನೆ ನಡೆದಿದೆಯಾ ಅದರ ವಿಚಾರಣೆಗೆ ಬಂದಿದ್ದೆನೆ ನಿಮ್ಮನ್ನು ವಿಚಾರಿಸಬೇಕಿದೆ ಎಂದು ಹಿಂದಿಯಲ್ಲಿ ತಿಳಿಸಿದ್ದ. ಇದೇ ಹೊತ್ತಿಗೆ ಇನ್ನೋರ್ವ ಅಪರಿಚಿತನ ಸ್ಥಳಕ್ಕಾಗಮಿಸಿ ಅತನನ್ನು ಪ್ರಶ್ನಿಸಿ ಅತನ ಗುರುತಿನ ಚೀಟಿ ಕೇಳಿ ಪರಿಶೀಲಿಸಿ ತನ್ನ ಕೈಯಲ್ಲಿದ್ದ ಉಂಗುರ ಹಾಗೂ ಒಂದಷ್ಟು ಹಣವನ್ನು ಕರವಸ್ತ್ರದಲ್ಲಿಟ್ಟು ಅತನ ಕೈಗೆ ನೀಡಿದ್ದ ಅದನ್ನು ಆತ ತನ್ನ ಪ್ಯಾಂಟಿನ ಕಿಸೆಯಲ್ಲಿಟ್ಟಿದ್ದ.ತದನಂತರ ಈ ವ್ಯಕ್ತಿ ಶಿವರಾಮ್ ಅವರ ಕೈಯಲ್ಲಿದ್ದ ಉಂಗುರ,ಹಣವನ್ನು ಕೊಡುವಂತೆ ತಿಳಿಸಿದ್ದ ಅದರಂತೆ ಅವರು ಅತನ ಕೈಗೆ ಒಪ್ಪಿಸಿದ್ದರು.

ಬಳಿಕ ಇವರಿಬ್ಬರು ಕಾಲ್ಕಿತ್ತಿದ್ದು,ನಂತರ ಈ ಇಬ್ಬರಿಂದ ಮೋಸ ಹೋದ ಬಗ್ಗೆ ಅರಿವಾಗಿ ಠಾಣೆಗೆ ದೂರು ನೀಡಿದ್ದರು.ಕೆಲ ಸಮಯದ ಹಿಂದೆ ಉಡುಪಿ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಜಾಕೀರ್ ಹುಸೇನ್ ಹಾಗೂ ಕಂಬರ್ ರಹೀಂ ಮಿರ್ಜಾ ಉಡುಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.ಈ ಸಂದರ್ಭ ಪೊಲೀಸರ ವಿಚಾರಣೆಯ ವೇಳೆ ಬಿ.ಸಿ.ರೋಡಿನ ಕೈಕಂಬದಲ್ಲಿ ವೃದ್ಧ ಶಿವರಾಮ್ ಪ್ರಸಾದ್ ರನ್ನು ವಂಚಿಸಿರವುದನ್ನು ಬಾಯಿಬಿಟ್ಟಿದ್ದರು.

ಇದೀಗ ಹಿರಿಯಡ್ಕ್ ಸಬ್ ಜೈಲಿನಲ್ಲಿದ್ದ ಈ ಆರೋಪಿಗಳಬ್ಬರನ್ನು ಬಾಡಿ ವಾರಂಟ್ ಮೂಲಕ ಎಸ್ಪಿ ಲಕ್ಷ್ಮೀಪ್ರಸಾದ್ ಅವರ ನಿರ್ದೇಶನದಲ್ಲಿ ಡಿವೈಎಸ್ಪಿ ವೆಲೆಂಟಿನ್ ಡಿಸೋಜ ಹಾಗೂ ಇನ್ಸ್ ಪೆಕ್ಟರ್ ನಾಗರಾಜ್ ಟಿ.ಡಿ.ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಪಿ.ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.ಬಳಿಕ ವಿಚಾರಣೆ ನಡೆಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

By suddi9

Leave a Reply

Your email address will not be published. Required fields are marked *