ಬಂಟ್ವಾಳ:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಿ ದಂಡ ವಿಧಿಸುತ್ತಿದ್ದರೆ, ಇನ್ನೊಂದೆಡೆ ಬಿಪಿಎಲ್ ರದ್ದುಗೊಳಿಸದಂತೆ ಆಡಳಿತ ಪಕ್ಷದ ಸದಸ್ಯರೇ ಪತ್ರಿಕಾ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿ.ಸಿ.ರೋಡು-ಜಕ್ರಿಬೆಟ್ಟು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ರೂ ೧೦೦ ಕೋಟಿ ಮತ್ತು ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ರೂ ೫೦ ಕೋಟಿ ಮೊತ್ತದ ಅನುದಾನ ನನ್ನ ಅವಧಿಯಲ್ಲಿ ಮೀಸಲಿಡಲಾಗಿದೆ. ಇದೀಗ ಸ್ವತಃ ಆಡಳಿತ ಪಕ್ಷದ ಸದಸ್ಯರೇ ಪ್ರತಿಭಟನೆ ನಾಟಕವಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.3btl-Rai (1)

ಬಂಟ್ವಾಳದಲ್ಲಿ ‘ರಾಜಧರ್ಮ’ ಪಾಲಿಸುತ್ತೇನೆ ಎಂದು ಭಾಷಣ ಮಾಡುವ ಶಾಸಕ ರಾಜೇಶ ನಾಯ್ಕ್ ಅವರು ಬಿಜೆಪಿ ಆಡಳಿತ ಹೊಂದಿರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚಾರಿ ಐಸಿಯು ಬಸ್ ನಿರ್ವಹಣೆಗೆ ಬಿಜೆಪಿ ಕಾರ್ಯಕರ್ತರನ್ನು ನೇಮಿಸುತ್ತಿದ್ದಾರೆ. ರಾಜಧರ್ಮ ಕೇವಲ ಭಾಷಣಕ್ಕೆ ಸೀಮಿತವಾಗದೆ ಅದು ಅನುಷ್ಠಾನಕ್ಕೆ ಬರಬೇಕು ಎಂದರು. ಬಂಟ್ವಾಳ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಮತ್ತು ಶಾಲಾ ಕಟ್ಟಡ ನಿರ್ಮಾಣ ಮತ್ತಿತರ ಕೋಟ್ಯಾಂತರ ವೆಚ್ಚದ ಕಾಮಗಾರಿಗೆ ಯಾರದ್ದೋ ಹೆಸರಿನಲ್ಲಿ ಗುತ್ತಿಗೆ ಪಡೆದು ಬಿಜೆಪಿ ಕಾರ್ಯಕರ್ತರು ಕಾಮಗಾರಿ ನಡೆಸುತ್ತಿದ್ದಾರೆ. ತುಂಬೆ ಅಣೆಕಟ್ಟೆ ನಿರ್ಮಾಣ ವೇಳೆ ಜಮೀನು ಕಳೆದುಕೊಂಡವರಿಗೆ ರೂ ೧೭ಕೋಟಿ ಮೊತ್ತದ ಪರಿಹಾರಧನ ಮಹಾನಗರ ಪಾಲಿಕೆ ಕಮಿಷನರ್ ಖಾತೆಯಲ್ಲಿ ಮೀಸಲಿಟ್ಟಿದ್ದೇನೆ. ಆದರೆ ನೈಜ ಸಂತ್ರಸ್ತ ಕೃಷಿಕರ ಬದಲಾಗಿ ಇತರ ಹೋರಾಟಗಾರರು ಸೃಷ್ಟಿಯಾಗಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ನಾನು ಮಂಜೂರುಗೊಳಿಸಿದ ಅನುದಾನಗಳ ಬಗ್ಗೆ ಮಂಜೂರಾತಿ ಆದೇಶ ಪತ್ರ ಸಹಿತ ಪತ್ರಿಕಾಗೋಷ್ಠಿ ನಡೆಸುತ್ತಿದ್ದನೇ ವಿನಃ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿರುವುದನ್ನೇ ದೊಡ್ಡ ಸಾಹಸ ಎಂದು ಬಿಂಬಿಸಿಕೊಂಡಿಲ್ಲ. ನನಗೆ ಮಣ್ಣಿನ ವ್ಯಾಪಾರ ಸಹಿತ ಕಲ್ಲು ಮತ್ತು ಮರಳು ದಂಧೆ ಇಲ್ಲ. ನನ್ನ ೧೩ ವರ್ಷಗಳ ಅವಧಿಯಲ್ಲಿ ಆಗಿರುವುದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಈಗಿನ ಶಾಸಕರ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ನಡೆದಿದೆ. ನಾನು ಎಂದಿಗೂ ಜಾತಿವಾದಿ ಮತ್ತು ಮತೀಯವಾದಿಯಾಗದೆ ನೈಜ ರಾಜಧರ್ಮ ಪಾಲಿಸಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ಜನಾರ್ಧನ್ ಚೆಂಡ್ತಿಮಾರ್, ಲವೀನಾ ವಿಲ್ಮಾ ಮೊರಾಸ್, ಮಲ್ಲಿಕಾ ವಿ ಶೆಟ್ಟಿ, ಧನಲಕ್ಷ್ಮೀ ಸಿ. ಬಂಗೇರ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *