ಬಂಟ್ಚಾಳ: ತಾಲ್ಲೂಕಿನ ಬಿ.ಸಿ.ರೋಡು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಮಕ್ಕಳ ಅನ್ನ ಕಸಿದು, ಶಾಲಾ ಸಂಸ್ಥಾಪಕ ಡಾ.ಕೆ.ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಬೆದರಿಸಿದ್ದು ರಾಜಧರ್ಮವೇ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಪ್ರಶ್ನಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಬಿಜೆಪಿ ಕಚೇರಿಯಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಪ್ರೇರಣೆ ನೀಡಿದ್ದ ಮಾಜಿ ಸಚಿವ ರೈ ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅಂದು ರೈಲು ಮೂಲಕ ಬೆಂಗಳೂರಿಗೆ ಅಕ್ರಮ ಮರಳು ಸಾಗಾಟ ಮಾಡಿರುವುದು ಅವರಿಗೆ ಮರೆತಿದೆಯೇ…? ಎಂದು ಪ್ರಶ್ನಿಸಿದರು. ಬಿಜೆಪಿ ಕಾರ್ಯಕರ್ತರು ಅಥವಾ ಮುಖಂಡರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರೆ ದಾಖಲೆ ಸಹಿತ ಪೊಲೀಸರಿಗೆ ಮಾಹಿತಿ ನೀಡುವುದು ಬಿಟ್ಟು ಅನಗತ್ಯ ಆರೋಪ ಯಾಕೆ…? ಎಂದರು.
ಶಾಸಕ ರಾಜೇಶ ನಾಯ್ಕ್ ಅವರು ಎಂದಿಗೂ ಅಕ್ರಮಗಳಿಗೆ ಪ್ರೋತ್ಸಾಹ ನೀಡಿಲ್ಲ. ಪ್ರಗತಿಪರ ಕೃಷಿಕರಾಗಿ ಅವರು ಕೆಂಪು ಕಲ್ಲಿನ ಗಣಿಗಾರಿಕೆ ಮತ್ತು ಸಿಮೆಂಟ್ ಕಂಪೆನಿಗೆ ಮಣ್ಣು ಪೂರೈಕೆ ಕಾನೂನು ಬದ್ಧವಾಗಿ ನಡೆಸುತ್ತಿದ್ದರೂ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು ಎಂದರು.
ಬಂಟ್ವಾಳ ಬೈಪಾಸ್ ಸಹಿತ ಮಾಣಿ ಮತ್ತು ಕಳ್ಳಿಗೆಯಲ್ಲಿ ಜಮೀನು ಮಾಡಿಕೊಂಡಿರುವ ರೈ ಅವರು ಓಡಾಡುವ ಇನ್ನೋವಾ ಕಾರು ‘ಸೀಡಿ ಕನ್ಸ್ ಟ್ರ ಕ್ಷನ್ಸ್’ ಸಂಸ್ಥೆಯ ಗುತ್ತಿಗೆದಾರರೊಬ್ಬರ ಹೆಸರಿನಲ್ಲಿರುವ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು. ಬೆಂಜನಪದವಿನನಲ್ಲಿ ಕ್ರೀಡಾಂಗಣ ಮಾಡುವುದಾಗಿ ತೆಂಗಿನ ಕಾಯಿ ಒಡೆದು ಅವರು ಮೀಸಲಿಟ್ಟ ರೂ ೧೦ ಕೋಟಿ ಎಲ್ಲಿಗೆ ಹೋಗಿದೆ…? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡೊಂಬಯ ಬಿ.ಅರಳ, ರವೀಶ ಶೆಟ್ಟಿ ಕರ್ಕಳ, ಗಣೇಶ ರೈ ಮಾಣಿ, ರೊನಾಲ್ಡ್ ಡಿಸೋಜ, ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ, ವಜ್ರನಾಥ ಕಲ್ಲಡ್ಕ ಮತ್ತಿತರರು ಇದ್ದರು.