ಬಂಟ್ವಾಳ:ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯೊಂದು ಅಲ್ಲಿನ ನಾಗರಿಕರು ಮತ್ತು ದಾನಿಗಳ ನೆರವಿಗೆ ಶಿಕ್ಷಕರ ಉತ್ಸಾಹವೂ ಒಟ್ಟುಗೂಡಿದಾಗ ಆ ಶಾಲೆ ಹೇಗೆ ಕಂಗೊಳಿಸುತ್ತದೆ ಎನ್ನುವುದಕ್ಕೆ ಉದಾಹರಣೆ ಇಲ್ಲಿದೆ. ಇಲ್ಲಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಸಮೀಪದ ಕುದ್ರೆಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿಕಲಿ ಕೊಠಡಿ ಸಹಿತ ಸುತ್ತಲೂ ಆಕರ್ಷಕ ಬಣ್ಣಗಳಿಂದ ರಾರಾಜಿಸುತ್ತಿದೆ.

ಕೇವಲ ಇಬ್ಬರು ಶಿಕ್ಷಕಿಯರು ಇದ್ದರೂ ಆಂಗ್ಲ ಮಾಧ್ಯಮ ಶಾಲೆಯನ್ನು ಮೀರಿಸುವಂತೆ ಸುಸಜ್ಜಿತ ವ್ಯವಸ್ಥೆ ಇಲ್ಲಿನ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಶಾಲಾಭಿವೃದ್ಧಿ ಸಮಿತಿ ಮತ್ತು ಊರಿನ ದಾನಿಗಳು ಶಾಲೆಯ ಏಳಿಗೆಗೆ ಕೈ ಜೋಡಿಸಿದ್ದಾರೆ.ಸುಮಾರು ೮೭ ಸೆಂಟ್ಸ್ ಜಮೀನು ಹೊಂದಿರುವ ಈ ಶಾಲೆಯಲ್ಲಿ ಲಾಕ್ ಡೌನ್ ವೇಳೆ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಬಿಸಿಯೂಟಕ್ಕೆ ಅಡುಗೆ ಕೋಣೆ, ಆಕರ್ಷಕ ನಲಿಕಲಿ ಕಟ್ಟಡ, ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ, ಸುಣ್ಣ ಬಣ್ಣಗಳಿಂದ ಶಾಲೆಗೆ ಹೊಸ ಹೊಳಪು ಬಂದಿದೆ.
ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ತಾರಗಳು ಪುಟ್ಟ ಮಕ್ಕಳ ಜ್ಞಾನವೃದ್ಧಿಗೆ ಪೂರಕವಾಗಿದೆ. ಕಳೆದ ೮ ವರ್ಷಗಳ ಹಿಂದೆ ಕೇವಲ ೧೯ ಮಂದಿ ವಿದ್ಯಾರ್ಥಿಗಳಿದ್ದರೆ, ಇದೀಗ ಒಂದರಿಂದ ಏಳನೇ ತರಗತಿತನಕ ಒಟ್ಟು ೭೩ ಮಂದಿ ಇದ್ದಾರೆ. ಕಳೆದ ಮೂರು ವರ್ಷಗಳಿಂದ ಒಂದನೇ ತರಗತಿಗೆ ವಿದ್ಯಾರ್ಥಿಗಳ ಸೇರ್ಪಡೆಯೂ ಹೆಚ್ಚಳವಾಗಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕಿಯರು ಮತ್ತು ಮಕ್ಕಳ ಪೋಷಕರು.