ಮುಂಬಯಿ: ಮೈಸೂರುನಲ್ಲಿ ಇತ್ತೀಚೆಗೆ ದೈವಾಧೀನರಾದ ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ)ನ ಮಾಜಿ ಅಧ್ಯಕ್ಷ ಯು.ರಾಮರಾವ್ ಅವರಿಗೆ ಶ್ರದ್ದಾಂಜಲಿ ಸಭೆಯು ಕಳೆದ ಶನಿವಾರ (ಆ.೨೧) ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿ ಹಾಗೂ ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಜೂಮ್ ಜಾಲತಾಣದ ಮೂಲಕ ಜರಗಿ ಯು ಟ್ಯೂಬ್ ಮೂಲಕ ನೇರ ಪ್ರಸಾರ ಗೊಳಿಸಲಾಯಿತು.
ವಿಶ್ವಪ್ರಸನ್ನ ಶ್ರೀಪಾದರು ಪೇಜಾವರ ಮಠ ಮುಂಬಯಿ ಶಾಖೆಗೆ ರಾಮರಾಯರು ಸಲ್ಲಿಸಿದ ಅನುಪಮ ಸೇವೆ ಸ್ಮರಿಸುತ್ತಾ, ನಮ್ಮ ಪೂಜ್ಯ ಗುರುಗಳು ಸ್ಥಾಪಿಸಿದ ಮಾಧ್ವ ಭವನದ ಪರಿಪೂರ್ಣ ಜವಾಬ್ದಾರಿ ಹೊತ್ತು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಾ ಎಲ್ಲರನ್ನು ಕೂಡಿಸಿಕೊಂಡು ಮಠವನ್ನು ಹಲವು ವರ್ಷಗಳ ಕಾಲ ನಡೆಸಿಕೊಂಡು ಬಂದಿದ್ದಾರೆ. ಯಾರ ಬದುಕಿನಿಂದ ಇನ್ನೂ ಹತ್ತು ಜನರು ಬದುಕುವಂತಾಗುತ್ತೋ ಅವರ ಬದುಕೇ ನಿಜವಾದ ಸಾರ್ಥಕ ಬದುಕು. ರಾಮರಾಯರದ್ದು ಅಂತಹ ಬದುಕು. ಅವರು ತಾನು ಮಾತ್ರ ಬದುಕಿದ್ದಲ್ಲ ತನ್ನೊಂದಿಗೆ ಹತ್ತು ಮಂದಿಗೆ ಬದುಕನ್ನು ಕಲ್ಪಿಸಿಕೊಟ್ಟವರು. ಸಮಾಜಕ್ಕೆ ಮೇಲ್ಪಂಕ್ತಿಯಾದವರು. ಅವರಿಗೆ ಶ್ರೀ ಕೃಷ್ಣ ಪರಮಾತ್ಮನು ಸದ್ಗತಿ ಪ್ರಾಪ್ತಿಸಲಿ ಎಂದು ಅಗಲಿದ ಆತ್ಮಕ್ಕೆ ಅನುಗ್ರಹಿಸಿದರು.
ಬಿಎಸ್‌ಕೆಬಿ ಸಂಸ್ಥೆಯಲ್ಲಿ ಜತೆ ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಅಧ್ಯಕ್ಷರಾಗಿ ಹಲವಾರು ವರ್ಷ ರಾಯರು ಸಲ್ಲಿಸಿದ ಸೇವೆ ಅಪಾರ. ಮುಂಬಯಿಯ ಪೇಜಾವರ ಮಠಕ್ಕೆ ಸ್ಥಳ ದೊರಕಿಸಿಕೊಳ್ಳಲು ಅವರು ತುಂಬಾ ಶ್ರಮ ಪಟ್ಟಿದ್ದಾರೆ. ನನಗೆ ಅವರೇ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಿದರು. ಅವರ ಅಗಲಿಕೆ ಗೋಕುಲಕ್ಕೆ ತುಂಬಲಾರದ ನಷ್ಟ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಿ, ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಡಾ| ಸುರೇಶ್ ರಾವ್ ಪ್ರಾರ್ಥಿಸಿದರು.
ಕರ್ನಾಟಕ ಬ್ಯಾಂಕ್‌ನ ಆಡಳಿತಾಧಿಕಾರಿ ಮಹಾಬಲೇಶ್ವರ ಭಟ್ ರಾಯರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ರಾಯರು ಸಮಾಜದಲ್ಲಿ ಉದಾತ್ತ ಧ್ಯೇಯವುಳ್ಳ ಒಬ್ಬ ಆದರ್ಶ ವ್ಯಕ್ತಿಯಾಗಿದ್ದರು. ಅವರ ಸರಳ ವ್ಯಕ್ತಿತ್ವ ಮೆಚ್ಚುವಂತಹುದು ಎಂದು ಅಗಲಿದ ಚೇತನಕ್ಕೆ ಶಾಂತಿ ಕೋರಿದರು.
ಗೋಕುಲದ ಉಪಾಧ್ಯಕ್ಷ ವಾಮನ್ ಹೊಳ್ಳ, ಗೌರವ ಕಾರ್ಯದರ್ಶಿ ಎ.ಪಿ.ಕೆ.ಪೋತಿ, ನಿಕಟ ಪೂರ್ವ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಲೆಕ್ಕ ಪರಿಶೋಧಕ ಅಶೋಕ್ ಮೇಲ್ಮನೆ, ಲಕ್ಷಿ÷್ಮÃಶ್ ಆಚಾರ್ಯ, ಎಸ್.ಆರ್ ಬಾಳ ಅವರು ರಾಮರಾಯರೊಂದಿಗಿನ ತಮ್ಮ ಒಡನಾಟ, ಅವರ ಶಿಸ್ತುಬದ್ಧ ಜೀವನ, ಕಾರ್ಯ ದಕ್ಷತೆ, ಸಮಯ ಪಾಲನೆ, ಗೋಕುಲಕ್ಕೆ ಸಲ್ಲಿಸಿದ ಸೇವೆ, ಆಶ್ರಯ ನಿರ್ಮಾಣಕ್ಕಾಗಿ ಅವರು ಪಟ್ಟ ಶ್ರಮವನ್ನು ಸ್ಮರಿಸಿಕೊಂಡರು.
ರಾಮರಾಯರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡ ಡಾ| ಎ.ಎಸ್ ರಾವ್ ಪೂರ್ಣಪ್ರಜ್ಞ ವಿದ್ಯಾಪೀಠ ಮತ್ತು ಪೇಜಾವರ ಮಠ ಮುಂಬಯಿ ಶಾಖೆಯ ವತಿಯಿಂದ ಶ್ರದ್ದಾಂಜಲಿ ಅರ್ಪಿಸಿದರು. ರಾಯರ ನಿಕಟ ಸಂಬAಧಿಕರು, ಸ್ನೇಹಿತರುಗಳಾದ ಡಾ| ಪ್ರಭಾಕರ್ ರಾವ್, ಡಾ| ಎ.ವಿ.ರಾವ್, ರಾಘವೇಂದ್ರ ಭಟ್ ರಾಯರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತ ಪಡಿಸಿದರು.
ಬಿಎಸ್‌ಕೆಬಿ ಕೋಶಾಧಿಕಾರಿ ಹರಿದಾಸ್ ಭಟ್, ಶ್ರೀಯುತರ ಮಗಳಂದಿರು ಜಯಶ್ರೀ ರಾವ್, ಜ್ಯೋತಿ ರಾವ್, ಅಳಿಯಂದಿರಾದ ಜಯಕುಮಾರ್, ಅಶೋಕ್ ಆಚಾರ್, ಸೊಸೆ ಪದ್ಮಿನಿ ರಾವ್, ಮೊಮ್ಮಗ ಅವಿನಾಶ್ ರಾವ್, ಮೊಮ್ಮಗಳು ಅನುರಾಧ ಬೆಳಪು ಅವರು ಉಪಸ್ಥಿತರಿದ್ದು, ತಮ್ಮ ದುಃಖದೊಂದಿಗೆ ಸಹಭಾಗಿಯಾಗಿದ್ದ ಎಲ್ಲಾ ಬಂಧು ಮಿತ್ರರಿಗೆ ಹಾಗೂ ಸಂಸ್ಥೆಗಳಿಗೆ ಸ್ತುತಿಸಿದರು. ಬಿಎಸ್‌ಕೆಬಿ ಜತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಸಂಘದ ವತಿಯಿಂದ ಕುಟುಂಬಕ್ಕೆ ನೀಡುವ ಸಂತಾಪ ಸೂಚಕ ಪತ್ರ ವಾಚಿಸಿದರು. ಕೊನೆಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಲಾಯಿತು.