ಮೂಡುಬಿದರೆ: ಬೆಂಗಳೂರಿನ ರಾಮಮೂರ್ತಿ ನಗರದ ಕಾಳಿಕಾಂಬಾ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಪ್ರಶಾಂತ ಆಚಾರ್ಯ (29) ವಿದ್ಯುತ್ ಶಾಕ್ ಹೊಡೆದು ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೂಡುಬಿದರೆ ಸಮೀಪದ ಪುತ್ತಿಗೆ ಗ್ರಾಮದ ಕಾಯರ್ಪುಂಡು ನಿವಾಸಿ ಸದಾಶಿವ ಆಚಾರ್ಯರ ಪುತ್ರರಾಗಿದ್ದಾರೆ. ಮೂಡುಬಿದರೆ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ವೈದಿಕ ಕಲಿತು ಕಳೆದ ಹಲವು ಸಮಯದಿಂದ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಅವರು ವಾರದ ಹಿಂದೆಯಷ್ಟೇ ಬೆಂಗಳೂರಿನ ಕಾಳಿಕಾಂಬಾ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸಕ್ಕೆ ಸೇರಿದ್ದರು.

ಸೋಮವಾರ ರಾತ್ರಿ ರಾಮಮೂರ್ತಿ ನಗರದಲ್ಲಿ ಭಾರೀ ಮಳೆಯಾಗಿದ್ದು ಕ್ಷೇತ್ರದ ಒಂದು ಭಾಗದ ವಿದ್ಯುತ್ ವಯರ್ ಕಡಿದು ಬಿದ್ದಿತ್ತು. ಇದರ ಅರಿವಿರದ ಪ್ರಶಾಂತ ಆಚಾರ್ಯ ಮಂಗಳವಾರ ಬೆಳಿಗ್ಗೆ 5.30ರ ಸುಮಾರಿಗೆ ಸ್ನಾನ ಮಾಡಿ ಬಟ್ಟೆ ಒಣಗಿಸಲೆಂದು ತೆರಳಿದಾಗ ಕಡಿದು ಬಿದ್ದ ವಯರ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಷೇತ್ರದ ಅಧ್ಯಕ್ಷರು ದೇವಸ್ಥಾನಕ್ಕೆ ಬಂದಾಗ ದುರಂತ ಬೆಳಕಿಗೆ ಬಂತು. ದೇಹದಲ್ಲಿ ಸುಟ್ಟ ಗಾಯವಾಗಿತ್ತು. ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು ಸಂಜೆ ಮೃತ ದೇಹವನ್ನು ಮನೆಗೆ ತರಲಾಯಿತು. ಮೃತರು ಅವಿವಾಹಿತರಾಗಿದ್ದು, ತಾಯಿ ಇದ್ದಾರೆ.