ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು 2020-21 ನೇ ಸಾಲಿನಲ್ಲಿ 194.85 ಕೋಟಿ ವ್ಯವಹಾರ ನಡೆಸಿದ್ದು, 49 ಲಕ್ಷ ರೂ. ನಿವ್ವಳ ಲಾಭಗಳಿಸಿದೆ.ಪ್ರಸಕ್ತ ವರ್ಷ ಸದಸ್ಯರಿಗೆ ಶೇ.10 ಡಿವಿಡೆಂಡ್ ನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ತಿಳಿಸಿದ್ದಾರೆ. ಈ ಕುರಿತಾಗಿ ಪತ್ರಿಕಾ ಪ್ರಕಟಣೆಯಲ್ಲಿ ವಿವರಣೆ ನೀಡಿರುವ ಅವರು, ಸಂಘದ ಠೇವಣಿಯನ್ನು 28.38 ಕೋ.ರೂ.ಗೆ ಹೆಚ್ಚಿಸಲಾಗಿದ್ದು, 39.08 ಕೋ.ರೂ. ಸಾಲ ಹೊರಬಾಕಿ ಇರುತ್ತದೆ, ಹೂಡಿಕೆ 3.88 ಕೋ.ರೂ.ವಿನಿಂದ 6.27 ಕೋ.ರೂ.ಗೆ ಏರಿಕೆ ಕಂಡಿದ್ದು, ದುಡಿಯುವ ಬಂಡವಾಳ 28.32 ಕೋ.ರೂ.ವಿನಿಂದ 48.68 ಕೋ.ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಆಡಿಟ್ ವರ್ಗೀಕರಣದಲ್ಲಿಯು ‘ಎ’ ತರಗತಿ ಪಡೆದಿದ್ದು, 2020-21 ನೇ ಸಾಲಿನಲ್ಲಿ 262 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿದ್ದು,1.52 ಕೋ.ರೂ.ಪಾಲು ಬಂಡವಾಳ ಜಮೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಅಧ್ಯಕ್ಷ ಪ್ರಭು ಅವರು ಸಂಘದ ಸದಸ್ಯರ ಅವಶ್ಯಕತೆಗನುಗುಣವಾಗಿ ಒಟ್ಟು 43.51 ಕೋ.ರೂ. ಸಾಲ ವಿತರಿಸಲಾಗಿದೆ.ಈ ಪೈಕಿ 1396 ರೈತ ಸದಸ್ಯರಿಗೆ 19.50 ಕೋ.ರೂ. ಬೆಳೆಸಾಲ 295 ರೈತ ಸದಸ್ಯರಿಗೆ 7.64 ಕೋ.ರೂ. ಕೃಷಿ ಅಭಿವೃದ್ದಿ ಸಾಲ ಸಹಿತ ಇನ್ನಿತರ ಸಾಲ ವಿತರಿಸಲಾಗಿದೆ ಎಂದು ವಿವರಿಸಿದ್ದಾರೆ.
ಸಂಘದಲ್ಲಿ ಪಡಿತರ ಸಾಮಾಗ್ರಿ ರಾಸಾಯನಿಕ ಗೊಬ್ಬರ, ಕೀಟನಾಶಕ ಸೇರಿದಂತೆ ಇನ್ನಿತರ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡಲಾಗುತ್ತಿದೆ. ಸಿದ್ಧಕಟ್ಟೆ ಪ್ರಧಾನ ಕಛೇರಿಯ ಬಳಿ ಎಮ್. ಎಸ್. ಸಿ. ಯೋಜನೆಯಡಿಯಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಗೋದಾಮು ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಬಾಡಿಗೆ ಕಟ್ಟಡದಲ್ಲಿದ್ದ ಸಂಘದ ಅಣ್ಣಳಿಕೆ ಶಾಖೆಯು ರಾಯಿ ಗ್ರಾಮದ ಸಂಘದ ಸ್ವಂತ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.ಸಂಘದ ಆರಂಬೋಡಿ ಮತ್ತು ರಾಯಿ ಶಾಖಾ ಕಛೇರಿಗಳು ಉತ್ತಮ ವ್ಯವಹಾರ ನಡೆಸುತ್ತಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸಂಘದಲ್ಲಿ ಸತೀಶ್ ಪೂಜಾರಿ ಅಲಕ್ಕೆ ಉಪಾಧ್ಯಕ್ಷರಾಗಿ ಉಳಿದಂತೆ ಪದ್ಮರಾಜ್ ಬಲ್ಲಾಳ್ ಮಾವಂತೂರು, ಸಂದೇಶ್ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ ರಾಯಿ, ದಿನೇಶ್ ಪೂಜಾರಿ, ಉಮೇಶ್ ಗೌಡ, ಜಾರಪ್ಪ ನಾಯ್ಕ, ವೀರಪ್ಪ ಪರವ, ದೇವರಾಜ್ ಸಾಲ್ಯಾನ್, ಅರುಣಾ ಎಸ್. ಶೆಟ್ಟಿ, ಮಂದಾರತಿ ಎಸ್.ಶೆಟ್ಟಿ, ಮಾಧವ ಶೆಟ್ಟಿಗಾರ್, ಕೇಶವ ಕಿಣಿ ನಿರ್ದೇಶಕರಾಗಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿಆರತಿ ಶೆಟ್ಟಿ ಯವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಂಘದ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.19 ರಂದು ಬೆಳಿಗ್ಗೆ 10.30 ಗಂಟೆಗೆ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಶಾಲೆಯ ಸಭಾಂಗಣದಲ್ಲಿ ಜರಗಲಿರುವುದು