ಬಂಟ್ವಾಳ: ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ನಡೆದ ೧೪ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೨೦ ಜೋಡಿ ಹಸೆಮಣೆಗೆ ಏರಿದರು.
ಬಂಟ್ವಾಳ ಸಮಾಜದಲ್ಲಿ ಅನಗತ್ಯ ಆಡಂಬರ ಮತ್ತು ಖರ್ಚು ವೆಚ್ಛ ಕಡಿಮೆ ಮಾಡಿ ಸಾಮೂಹಿಕ ವಿವಾಹವಾಗುವ ನವದಂಪತಿಗಳು ಭಜನೆ ಮತ್ತಿತರ ದೇವರ ಆರಾಧನೆ ಮೂಲಕ ಸಚ್ಚಾರಿತ್ರ್ಯ ಬೆಳೆಸಿಕೊಳ್ಳಬೇಕು. ಅಪಾರ ಮಂದಿ ಗಣ್ಯರು ಮತ್ತು ಗುರು ಹಿರಿಯರ ಸಮ್ಮುಖದಲ್ಲಿ ಸಾಮೂಹಿಕ ವಿವಾಹವಾಗುತ್ತಿರುವ ವಧು-ವರರು ಭಾಗ್ಯವಂತರು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದ ೧೪ನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ನೇತೃತ್ವದಲ್ಲಿ ೪೬೦ಕ್ಕೂ ಮಿಕ್ಕಿ ಮಂದಿ ಜೋಡಿಗೆ ಸಾಮೂಹಿಕ ವಿವಾಹ ನೆರವೇರಿಸಿ ಪುಣ್ಯ ಸಂಪಾದನೆ ಆಗಿದೆ. ಈ ಮಹತ್ಕಾರ್ಯ ನಿರಂತರವಾಗಿ ಮುನ್ನಡೆಸಲು ಇಲ್ಲಿನ ಬಂಗ್ಲೆ ಮೈದಾನವನ್ನು ಹವಾನಿಯಂತ್ರಿತ ಒಳಾಂಗಣ ಕ್ರೀಡಾಂಗಣವಾಗಿ ಪರಿವರ್ತಿಸಲಾಗುವುದು. ರೂ ೬ ಕೋಟಿ ವೆಚ್ಚದಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಲಿದೆ. ಮುಖ್ಯಮಂತ್ರಿ ಬಜೆಟ್ ನಲ್ಲಿ ಪ್ರಕಟಿಸಿದ್ದ ರೂ ೨೯ಕೋಟಿ ವೆಚ್ಚದ ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆ ಪುಂಜಾಲಕಟ್ಟೆ ಪರಿಸರದಲ್ಲಿ ಶೀಘ್ರವೇ ಅನುಷ್ಠಾನಗೊಳ್ಳಲಿದೆ ಎಂದರು.
ಪೆದುಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಡಾಜೆಗುತ್ತು ರವಿಶಂಕರ ಶೆಟ್ಟಿ ವಧುವಿಗೆ ಮಂಗಲಸೂತ್ರ ವಿತರಿಸಿ ಶುಭಹಾರೈಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಂಬೈ ಉದ್ಯಮಿ ಸುಂದರರಾಜ್ ಹೆಗ್ಡೆ ದಂಪತಿ, ಬಿಜೆಪಿ .ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಉದ್ಯಮಿ ಟಿ.ಹರೀಂದ್ರ ಪೈ, ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಉಪಾಧ್ಯಕ್ಷ ಲಕ್ಷ್ಮೀನಾರಾಣ ಹೆಗ್ಡೆ, ಪ್ರಮುಖರಾದ ಮಾಧವ ಎಸ್. ಮಾವೆ, ಮಂಜುಳಾ ಮಾಧವ ಮಾವೆ, ರಮೇಶ್ ಶೆಟ್ಟಿ ಮಜಲೋಡಿ, ಲಕ್ಷ್ಮೀನಾರಾಯಣ ಉಡುಪ, ಪುನೀತ್ ಕುಮಾರ್, ದಿನೇಶ್ ಅಮ್ಟೂರು, ಓಂಪ್ರಸಾದ್, ಎಸೈ ಸುಕೇಶ್, ಕ್ಲಬ್ಬಿನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ. ಮತ್ತಿತರರು ಇದ್ದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಸುಧಾಕರ ಆಚಾರ್ಯ ಮಾರ್ನಬೈಲು, ಅರ್ಜುನ್ ಭಂಡಾರ್ಕರ್ ಬಂಟ್ವಾಳ, ರಾಜೇಂದ್ರ ಕಂರ್ಬಡ್ಕ ಇವರಿಗೆ ‘ಸ್ವಸ್ತಿ ಸಿರಿ’ ರಾಜ್ಯ ಪ್ರಶಸ್ತಿ ಮತ್ತು ಎಂ.ಡಿ.ವೆಂಕಪ್ಪ, ನಾರಾಯಣ ನಾವಡ, ರಮೇಶ್.ಕೆ. ಪುಣಚ, ಆಪ್ತಿ ಬಿ.ಪೂಜಾರಿ, ಯಶವಂತ ಸ್ನೇಹಗಿರಿ ಸಹಿತ ಅಜಿಲಮೊಗರು ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಇವರಿಗೆ ‘ಸ್ವಸ್ತಿಕ್ ಸಂಭ್ರಮ’ ಗೌರವ ಸಮರ್ಪಣೆ, ಪ್ರತಿಭಾನ್ವಿತ ವಿದ್ಯಾರ್ಥಿನಿ ವಿಧಿಶಾ ಮತ್ತು ಸ್ವಾತಿ ಕುಕ್ಕಿಪಾಡಿ ಇವರನ್ನು ಅಭಿನಂದಿಸಲಾಯಿತು.
ಆಕರ್ಷಕ ಮೆರವಣಿಗೆ:
ಆರಂಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿಯಿಂದ ಆಕರ್ಷಕ ದಿಬ್ಬಣ ಮೆರವಣಿಗೆಗೆ ಬ್ಯಾಂಡು, ಕೊಂಬು, ಚೆಂಡೆ ವಾದನ ಮೆರುಗು ನೀಡಿತು. ಗುರುವಾಯನಕೆರೆ ಕೃಷ್ಣ ಭಟ್ ಪೌರೋಹಿತ್ಯದಲ್ಲಿ ಒಟ್ಟೊ ೨೦ ಜೋಡಿ ವಧು-ವರರು ಹಸೆಮಣೆಗೆ ಏರಿದರು.
ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿ, ಸಂಚಾಲಕ ರಾಜೇಶ್ ಪಿ. ಬಂಗೇರ ವಂದಿಸಿದರು. ನಿವೃತ್ತ ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.